
ಬಸವರಾಜ ಹೊರಟ್ಟಿ ಮತ್ತು ನಾಗರಾಜ್ ಯಾದವ್
ಬೆಂಗಳೂರು: ಕಾಂಗ್ರೆಸ್‌ನ ನಾಗರಾಜ್ ಯಾದವ್ ಅವರು ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಸದನದಲ್ಲೇ ಆಕ್ರೋಶ ವ್ಯಕ್ತಪಡಿಸಿ, ನಂತರ ಕ್ಷಮೆಯಾಚಿಸಿದ ಪ್ರಸಂಗಕ್ಕೆ ಸೋಮವಾರ ನಡೆದ ವಿಧಾನಪರಿಷತ್ ಕಲಾಪ ಸಾಕ್ಷಿಯಾಯಿತು.
ಪ್ರಶ್ನೋತ್ತರ ಅವಧಿ ನಿಗದಿಗಿಂತ ಹೆಚ್ಚು ಸಮಯ ತೆಗೆದುಕೊಂಡದ್ದನ್ನು ಉಲ್ಲೇಖಿಸಿದ ಬಸವರಾಜ ಹೊರಟ್ಟಿ ಅವರು, ‘ಪ್ರತಿ ದಿನ ಪ್ರಶ್ನೋತ್ತರಕ್ಕೆ 75 ನಿಮಿಷ ನಿಗದಿ ಮಾಡಲಾಗಿದೆ. ಪ್ರತಿ ಸದಸ್ಯರು 10ರಿಂದ 20 ನಿಮಿಷ ತೆಗೆದುಕೊಂಡರೆ ಮಧ್ಯಾಹ್ನದವರೆಗೆ ಇದೇ ಆಗುತ್ತದೆ. 75 ನಿಮಿಷಕ್ಕೆ ಮುಗಿಸಿದರೆ ಉಳಿದ ಸದಸ್ಯರ ಪ್ರಶ್ನೆಗಳು ವ್ಯರ್ಥವಾಗುತ್ತವೆ. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೂ ಸಮಯ ಸಿಗುವುದಿಲ್ಲ’ ಎಂದರು.
ಪ್ರಶ್ನೋತ್ತರಕ್ಕೆ ಹೆಚ್ಚು ಸಮಯ ತೆಗೆದುಕೊಂಡ ಸದಸ್ಯರ ಹೆಸರು ಹೇಳುವಾಗ ನಾಗರಾಜ್ ಯಾದವ್ ಅವರನ್ನೂ ಸಭಾಪತಿ ಹೆಸರಿಸಿದರು. ಆಗ ಆಕ್ರೋಶಗೊಂಡ ಯಾದವ್, ‘ನನಗೂ ನಿಯಮಗಳ ಬಗ್ಗೆ ಗೊತ್ತಿದೆ. ನಾನೂ ಓದಿಕೊಂಡಿದ್ದೇನೆ’ ಎಂದು ಸಭಾಪತಿಗಳಿಗೆ ಏರಿದ ಧ್ವನಿಯಲ್ಲಿ ಉತ್ತರಿಸಿದರು. ಅವರ ಮಾತನ್ನು ಎಲ್ಲ ಸದಸ್ಯರೂ ಪಕ್ಷಭೇದ ಮರೆತು ಖಂಡಿಸಿದರು. ನಂತರ ಯಾದವ್ ಕ್ಷಮೆಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.