
ಬಸವರಾಜ ಹೊರಟ್ಟಿ
ಸುವರ್ಣ ವಿಧಾನಸೌಧ (ಬೆಳಗಾವಿ): ‘ನೇಮಕಾತಿ ಸೇರಿದಂತೆ ಯಾವುದೇ ವಿಷಯದಲ್ಲಿ ಅವ್ಯವಹಾರ ನಡೆದಿರುವುದನ್ನು ಸಾಬೀತು ಮಾಡಿದರೆ ಒಂದು ಕ್ಷಣವೂ ಸ್ಥಾನದಲ್ಲಿ ಮುಂದುವರಿಯುವುದಿಲ್ಲ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೆಲವರು ಸುಮ್ಮನೆ ಆರೋಪಗಳನ್ನು ಮಾಡುತ್ತಾರೆ. ಸಾಕ್ಷ್ಯಾಧಾರ ಇಟ್ಟುಕೊಂಡು ಮಾತನಾಡಬೇಕು. ಎಂಟು ಬಾರಿ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಸಭಾಪತಿಯಾದ ನಂತರವೂ ಪಾರದರ್ಶಕವಾಗಿ ಇದ್ದೇನೆ. ಸಭಾಪತಿ ಕಚೇರಿಯಲ್ಲಿ ಭ್ರಷ್ಟಾಚಾರದ ದೂರುಗಳಿಗೆ ತಕ್ಷಣ ಸ್ಪಂದಿಸಿದ್ದೇನೆ. ಆರೋಪ ಮೇಲ್ನೋಟಕ್ಕೆ ಸಾಬೀತಾದ ಪ್ರಕರಣಗಳಲ್ಲಿ ಮೂವರ ವಿರುದ್ಧ ಕ್ರಮ ಜರುಗಿಸಲಾಗಿದೆ. ನನ್ನ ಮೇಲಿನ ಆರೋಪವನ್ನು ನಿಯಮದಂತೆ ಮಂಡಿಸಿದರೆ ನಿಯಮದಂತೆ ಕ್ರಮವಹಿಸಲಾಗುವುದು. ತಪ್ಪು ಕಂಡುಬಂದರೆ ರಾಜೀನಾಮೆ ನೀಡುವೆ. ಇಲ್ಲದಿದ್ದರೆ ಸಭಾಪತಿ ಪೀಠದ ಗೌರವಕ್ಕಾಗಿಯಾದರೂ ಆರೋಪ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದರು.
ಡಿ.10ರಂದು ಪ್ರಶ್ನೋತ್ತರ ಅವಧಿ ಮುಗಿದ ನಂತರ ಇಡೀ ದಿನದ ಕಲಾಪವನ್ನು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು. ಕಲಾಪದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಯೋಜನೆಗಳ ಅನುಷ್ಠಾನ, ಅರಣ್ಯಭೂಮಿ ಅತಿಕ್ರಮಣ, ಸಂತ್ರಸ್ತರ ಸಮಸ್ಯೆ ಹಾಗೂ ಪರಿಹಾರೋಪಾಯಗಳು, ರೈತರು ಎದುರಿಸುತ್ತಿರುವ ಸಮಸ್ಯೆ, ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಈ ಅಧಿವೇಶನಕ್ಕೆ ಒಟ್ಟು 1,649 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ನಿಯಮ 72ರಡಿ 112 ಸೂಚನೆ, ನಿಯಮ 330ರಡಿ ಬಂದಂತಹ 84 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಕಲಾಪ ಸಲಹಾ ಸಮಿತಿ ತೀರ್ಮಾನದಂತೆ ಇತರೆ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದು ಹೇಳಿದರು.
ನೇಮಕಾತಿ ಅಕ್ರಮಕ್ಕೆ ದಾಖಲೆಗಳಿವೆ: ಯಾದವ್
‘ವಿಧಾನಪರಿಷತ್ ಕಾರ್ಯಾಲಯದಲ್ಲಿ ನಡೆದ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದಕ್ಕೆ ದಾಖಲೆಗಳಿವೆ. ಎಲ್ಲ ದಾಖಲೆಗಳನ್ನೂ ಸದನದ ಮುಂದೆ ಇಡುತ್ತೇನೆ’ ಎಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪುನರುಚ್ಚರಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು ‘ಸಭಾಪತಿ ಕಾರ್ಯಾಲಯವೇ ಅವ್ಯವಹಾರದಲ್ಲಿ ಭಾಗಿಯಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯ ನಂತರ ತಮಗೆ ಬೇಕಾದಂತೆ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಶೀಘ್ರ ದಾಖಲೆ ಬಿಡುಗಡೆ ಮಾಡಲಾಗುವುದು. ಪಕ್ಷ ಅನುಮತಿ ನೀಡಿದರೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.