ADVERTISEMENT

ಆರ್‌ಎಸ್‌ಎಸ್‌ ಇಟಲಿ ಮೂಲದ್ದಲ್ಲ: ಸಿದ್ದರಾಮಯ್ಯಗೆ ಸಚಿವ ಬಿ.ಸಿ. ನಾಗೇಶ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 28 ಮೇ 2022, 7:57 IST
Last Updated 28 ಮೇ 2022, 7:57 IST
ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ಶಿಕ್ಷಣ ಸಚಿವ ಬಿ.ಸಿ. ನಾಗೇಶ್   

ಕೊಪ್ಪಳ: ‘ದೇಶಭಕ್ತ ಸಂಘಟನೆ ಆರ್‌ಎಸ್‌ಎಸ್‌ನದ್ದು ಇಟಲಿ ಮೂಲವಲ್ಲ. 70 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಸಿದ್ದರಾಮಯ್ಯ 5 ವರ್ಷ ಆಡಳಿತ ಮಾಡಿದ್ದಾರೆ. ಆಗ ಸಂಘದ ಮೂಲ ತಿಳಿದುಕೊಂಡು ಏನಾದರೂ ಮಾಡಬಹುದಿತ್ತು’ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿಧಾನಸಭೆ ಪ್ರತಿಪಕ್ಷ ನಾಯಕನಿಗೆ ತಿರುಗೇಟು ನೀಡಿದರು.

ಅವರು ನಗರದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಜಾಬ್ ಪ್ರಕರಣದ ಹಿಂದೆ ಕಾಂಗ್ರೆಸ್ ಪಿತೂರಿ ಇದೆ. ಪರೋಕ್ಷವಾಗಿ ಕಾಂಗ್ರೆಸ್ ಹಿಜಾಬ್ ಪರ. ನಾವು ಹಿಜಾಬ್ ಹಿಂದೆ ಇರೋ ಪಿತೂರಿ ನೋಡುತ್ತಿದ್ದೇವೆ‌. ಈ ದೇಶದ ಕಾನೂನು ಉಲ್ಲಂಘನೆ ಮಾಡುವ ಪಿತೂರಿ ನೋಡುತ್ತಿದ್ದೇವೆ‌. ಇವತ್ತಲ್ಲ ನಾಳೆ ಅವರು ಇಡೀ ದೇಶದ ಕಾನೂನು ಉಲ್ಲಂಘನೆ ಮಾಡುತ್ತೇವೆ ಎನ್ನುತ್ತಾರೆ‌. ಕೆಲವು ರಾಜಕೀಯ ಪಕ್ಷಗಳು ವೋಟ್‌ಬ್ಯಾಂಕ್‌ಗೆ ಅವರನ್ನು (ಮುಸ್ಲಿಮರು) ಬೆಂಬಲಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ADVERTISEMENT

ಈ ದೇಶದ ಇತಿಹಾಸವನ್ನು ಮಕ್ಕಳಿಗೆ ತಿಳಿಸುವುದರಲ್ಲಿ ಯಡವಟ್ಟಾಗಿದೆ ಅನಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಗ್ರಾಮಗಳಿಂದ ಭಾಗಿಯಾಗಿದ್ದಾರೆ. ಇತಿಹಾಸದ ಪುಸ್ತಕಗಳಲ್ಲಿ ನಾವು ಫೇಲಾಗಿದ್ದ ಕಾರಣ, ಕಾರ್ಯಕ್ರಮದ ಮೂಲಕ ನಾವು ಪರಿಚಯ ಮಾಡುತ್ತೇವೆ ಎಂದು ಅವರು ಹೇಳಿದರು.

ಈ ದೇಶದ ಜನರಿಗೆ ಯಾವುದು ನಿಜ, ಯಾವುದು ಸುಳ್ಳು ಅನ್ನುವುದು ಗೊತ್ತಿದೆ. ಮೊದಲು ಟಿಪ್ಪು, ಭಗತ್ ಸಿಂಗ್, ನಾರಾಯಣ ಗುರು, ಬಸವಣ್ಣ ಅವರ ವಿಚಾರಗಳನ್ನು ಪಠ್ಯದಿಂದ ತಗೆದು ಹಾಕಿದರು ಅಂತ ಸುಳ್ಳು ಹೇಳಿದರು. ಕಾಂಗ್ರೆಸ್ ಸುಳ್ಳು ಹೇಳಿ ಹಿಂದೂ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಅದನ್ನು ನಾವು ಸಮರ್ಥವಾಗಿ ತಡೆಯಲಿದ್ದೇವೆ ಎಂದು ಸಚಿವರು ಹೇಳಿದರು.

ಬ್ರಿಟಿಷರಿಂದ ಅಧಿಕಾರ ವಹಿಸಿಕೊಂಡ ದಿನದಿಂದ ಕಾಂಗ್ರೆಸ್ ಮಾಡಿದ್ದು ಒಡೆಯುವ ಕೆಲಸವನ್ನೇ. ಹಿಂದಿನ ಸರ್ಕಾರ ಮಕ್ಕಳನ್ನು ಒಡೆಯುವ ಕೆಲಸ ಮಾಡಿತ್ತು. ಅದರ ಪರಿಣಾಮ ಏನಾಗಿದೆ ಎನ್ನುವುದನ್ನು ನಾವು ನೋಡಿದ್ದೇವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.