ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ವಿಮಾನ ನಿಲ್ದಾಣಗಳಲ್ಲಿ ಸೌಲಭ್ಯ, ಪ್ರಯಾಣಿಕ ಸ್ನೇಹಿ ಸೌಕರ್ಯ ಹಾಗೂ ತಂತ್ರಜ್ಞಾನಗಳ ಬಳಕೆಗಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಎಲ್) ಎಸಿಐನ 2ನೇ ಹಂತದ ಪ್ರಮಾಣಪತ್ರ ಪಡೆದಿದೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯು (ಎಸಿಐ) ಪ್ರವೇಶ ವರ್ಧಕ ಮಾನ್ಯತೆ (ಎಇಎ) ಕಾರ್ಯಕ್ರಮದಡಿ ವಿಮಾನ ನಿಲ್ದಾಣಗಳಲ್ಲಿನ ಸೌಲಭ್ಯ, ತಂತ್ರಜ್ಞಾನ ಬಳಕೆ, ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ಆಧರಿಸಿ ಮಾನ್ಯತೆಯನ್ನು ನೀಡುತ್ತದೆ. ಈ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎಸಿಐನ 2ನೇ ಹಂತದ ಮಾನ್ಯತೆ ಪಡೆದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ಸುಲಭವಾಗಿ ಸಂಚರಿಸಲು ಹಾಗೂ ಇತರ ಸೌಲಭ್ಯಗಳನ್ನು ಸರಳವಾಗಿ ಬಳಸಿಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಅಗತ್ಯತೆ ಪೂರೈಸುವ ಉದ್ದೇಶದಿಂದ ವಿಮಾನ ನಿಲ್ದಾಣದಲ್ಲಿ ಅಗತ್ಯ ಸೌಕರ್ಯ ಒದಗಿಸುವ ಎಇಎ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಇದೆಲ್ಲವನ್ನು ಪರಿಗಣಿಸಿ ಎಇಎ ಮಾನ್ಯತೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣಗಳ ಕಾರ್ಯತಂತ್ರ, ನೀತಿ ನಿಯಮ ಮತ್ತು ಅವುಗಳಿಂದ ದೊರೆಯುವ ಫಲಿತಾಂಶವನ್ನು ಎಸಿಐ ಮೌಲ್ಯಮಾಪನ ಮಾಡುತ್ತದೆ. ಪ್ರಯಾಣಿಕರು, ಸಿಬ್ಬಂದಿ ಸೇರಿದಂತೆ ವಿಮಾನ ನಿಲ್ದಾಣದ ಎಲ್ಲ ಬಳಕೆದಾರರ ಪ್ರಯಾಣ ಅನುಭವದ ಅಭಿಪ್ರಾಯ ಆಧರಿಸಿ ಮಾನ್ಯತೆ ನೀಡಲಾಗಿದೆ ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಹೇಳಿದ್ದಾರೆ.
‘ಎಸಿಐ ನೀಡುವ ಪ್ರವೇಶ ವರ್ಧಕ ಮಾನ್ಯತೆ ಕಾರ್ಯಕ್ರಮದಡಿ 2ನೇ ಹಂತ ಮಾನ್ಯತೆ ಪಡೆದಿರುವುದು ಸಂತಸ ತರಿಸಿದೆ. ಪ್ರವೇಶ ವರ್ಧಕ ಮಾನ್ಯತೆಯು ಕೇವಲ ಮೂಲಸೌಕರ್ಯವನ್ನು ಪರಿಗಣಿಸುವುದಿಲ್ಲ ಬದಲಾಗಿ ಪ್ರತಿಯೊಬ್ಬ ಪ್ರಯಾಣಿಕರ ಅನುಭವವನ್ನು ಒಳಗೊಂಡಿರುತ್ತದೆ ಎಂಬ ನಮ್ಮ ನಂಬಿಕೆಯ ಪ್ರತಿಬಿಂಬವಾಗಿದೆ’ ಎಂದು ಸತ್ಯಕಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.