
ಎಂ. ಜಿ ರಸ್ತೆಯ ಮೆಟ್ರೋ ನಿಲ್ದಾಣ
ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ಆಚರಿಸುವ ಸಲುವಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿಶೇಷವಾಗಿ 20 ಸಾವಿರ ಪೊಲೀಸರನ್ನು ನೇಮಕ ಮಾಡಿದ್ದಾರೆ.
ಡಿಸೆಂಬರ್ 31ರ ರಾತ್ರಿ ನಗರದಾದ್ಯಂತ ಹೊಸ ವರ್ಷದ ಸಂಭ್ರಮ ಜೋರಾಗಿರುವುದರಿಂದ 50 ಫ್ಲೈ ಓವರ್‌ಗಳನ್ನು ತಾತ್ಕಾಲಿಕವಾಗಿ ನಿರ್ಭಂಧಿಸಲಾಗಿದೆ. ಜೊತೆಗೆ ಎಂಜಿ ರಸ್ತೆ ಮೆಟ್ರೊ ಸ್ಟೇಷನ್ ಅನ್ನು ಕೂಡ ರಾತ್ರಿ 9.30ರ ಬಳಿಕ ನಿರ್ಬಂಧಿಸಲಾಗಿದೆ.
ಹೊಸ ವರ್ಷದ ಸಂಭ್ರಮದ ವೇಳೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರದಲ್ಲಿ 166 ಕಡೆಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ. ವ್ಹೀಲಿಂಗ್ ಹಾಗೂ ಅಪಾಯಕಾರಿ ಸ್ಟಂಟ್ ಮಾಡುವವರ ಮೇಲೆ ಕಠಿಣ ಕ್ರಮ. ಇವುಗಳ ಮೇಲ್ವಿಚಾರಣೆ ನಡೆಸಲು 92 ಸ್ಥಳಗಳನ್ನು ಗುರುತಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್
ಡಿಸೆಂಬರ್ 31ರ ರಾತ್ರಿ10 ಗಂಟೆಗೆ ಮಹಾತ್ಮ ಗಾಂಧಿ ಮೆಟ್ರೊ ನಿಲ್ದಾಣ ಬಂದ್ ಆಗಲಿದೆ. ಈ ನಿಲ್ದಾಣಕ್ಕೆ ಪರ್ಯಾಯವಾಗಿ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣ ಹಾಗೂ ಟ್ರಿನಿಟಿ ಮೆಟ್ರೊ ನಿಲ್ದಾಣಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇನ್ನೂ ಮೆಟ್ರೊ ಸಂಚಾರ ತಡರಾತ್ರಿ 2 ಗಂಟೆಯವರೆಗೂ ಇರಲಿದೆ.
ಡಿಸೆಂಬರ್ 31 ರಂದು ರಾತ್ರಿ 8 ಗಂಟೆಯಿಂದ ಜನವರಿ 1, 2026ರ ಬೆಳಗಿನ ಜಾವ 2 ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಪೊಲೀಸ್ ಮತ್ತು ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಜೊತೆಗೆ ಭದ್ರತೆಯ ದೃಷ್ಟಿಯಿಂದ ಬೆಂಗಳೂರಿನಾದ್ಯಂತ ವಿವಿಧ ಸ್ಥಳಗಳಲ್ಲಿ ವಾಚ್ ಟವರ್‌ಗಳ ನಿಯೋಜನೆ. ಸುರಕ್ಷಿತ ವಲಯಗಳ ಗುರುತಿಸುವಿಕೆ ಹಾಗೂ ಹೀಟ್ ಮ್ಯಾಪ್ ವ್ಯವಸ್ಥೆ ಮಾಡಲಾಗಿದೆ. ಸಹಾಯ, ದೂರುಗಳಿಗಾಗಿ ಮಹಿಳಾ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಜನಸಂದಣಿ ನಿಯಂತ್ರಣಕ್ಕೆ ಮೆಟ್ರೊ, ಸಂಚಾರ ಸುಗಮಗೊಳಿಸಲು ಬಸ್ ಸೇವೆಗಳ ಸಮಯದ ಅವಧಿ ಹೆಚ್ಚಳ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.