ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ‘ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದು ಯಾವುದೇ ತಪ್ಪಿಲ್ಲ. ಈ ವಿಚಾರದಲ್ಲಿ ಬಿಜೆಪಿ–ಜೆಡಿಎಸ್ ರಾಜಕೀಯವಾಗಿ ಆರೋಪ ಮಾಡುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರಕರಣದಲ್ಲಿ ಮೇಲ್ನೋಟಕ್ಕೆ ಯಾರ್‍ಯಾರ ಲೋಪ ಇದೆಯೋ ಅವರ ಮೇಲೆ ಕ್ರಮ ಜರುಗಿಸಲಾಗಿದೆ. ವಿರೋಧಪಕ್ಷಗಳ ಬೇಡಿಕೆಯಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇನೆ. ಯಾರ ಮೇಲೂ ಏಕಮುಖವಾಗಿ ಕ್ರಮ ಕೈಗೊಂಡಿಲ್ಲ’ ಎಂದರು.
‘ಕಾರ್ಯಕ್ರಮದ ಬಂದೋಬಸ್ತ್ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರು ನನಗೆ ಮಾಹಿತಿ ನೀಡಿರಲಿಲ್ಲ. ಅದು ಪೊಲೀಸರ ಲೋಪ. ಕೇವಲ ಪೊಲೀಸ್ ಆಯುಕ್ತರನ್ನು ಮಾತ್ರ ಅಮಾನತು ಮಾಡಿಲ್ಲ. ಐವರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಗುಪ್ತಚರ ವಿಭಾಗದವರನ್ನು ವರ್ಗಾವಣೆ ಮಾಡಿದ್ದೇವೆ. ಗೋವಿಂದರಾಜು ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆಯಲಾಗಿದೆ’ ಎಂದರು.
ವಿಧಾನಸೌಧ ಕಾರ್ಯಕ್ರಮಕ್ಕೆ ಮಾತ್ರ ಆಹ್ವಾನ
‘ಕಾರ್ಯಕ್ರಮ ಸಂಬಂಧ ಕೆಎಸ್‌ಸಿಎ ಕಾರ್ಯದರ್ಶಿ ಹಾಗೂ ಖಜಾಂಚಿ ನನ್ನನ್ನು ಆಹ್ವಾನಿಸಿದ್ದರು. ವಿಧಾನಸೌಧದ ಎದುರಿಗೆ ನಡೆದ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೆ. ಅದರಲ್ಲಿ ರಾಜ್ಯಪಾಲರೂ ಪಾಲ್ಗೊಂಡಿದ್ದರು. ಅಲ್ಲಿ ಯಾವುದೇ ಲೋಪ ಆಗಿಲ್ಲ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿದ್ದು, ಅಲ್ಲಿ ಭದ್ರತಾ ಲೋಪ ಎಸಗಿದ ಪೊಲೀಸರ ಮೇಲೆ ಕ್ರಮ ಜರುಗಿಸಲಾಗಿದೆ. ಮಧ್ಯಾಹ್ನ 3.50ಕ್ಕೆ ಕಾಲ್ತುಳಿತದಿಂದ ಸತ್ತದ್ದು ವರದಿಯಾಗಿದ್ದರೂ, ನನಗೆ ಸಂಜೆ 5.45ಕ್ಕೆ ಮಾಹಿತಿ ತಿಳಿಯಿತು’ ಎಂದರು.
‘ಬಿಜೆಪಿಯವರೇ ಆಟಗಾರರ ಮೆರವಣಿಗೆಗೆ ಅನುಮತಿ ನೀಡುವಂತೆ ಕೋರಿ ಪತ್ರ ಬರೆದಿದ್ದರು. ಈಗ ಉಲ್ಟಾ ಹೊಡೆದಿದ್ದಾರೆ. ವಿಧಾನಸೌಧದ ಮುಂಭಾಗ ಮಾಡಿ ಎಂದು ನಾನು ಹೇಳದೇ ಹೋಗಿದ್ದರೆ ಬಿಜೆಪಿಯವರು ಬೇರೆಯದ್ದೇ ಬಣ್ಣ ಕಟ್ಟುತ್ತಿದ್ದರು’ ಎಂದು ‘ಬಿಜೆಪಿ ಕರ್ನಾಟಕ’ ಮಾಡಿದ್ದ ‘ಎಕ್ಸ್’ ಪೋಸ್ಟ್ ಪ್ರದರ್ಶಿಸಿದರು.
ಮೋದಿ ರಾಜೀನಾಮೆ ಕೊಟ್ಟರಾ?
‘ಕುಂಭಮೇಳದಲ್ಲಿ 50–60 ಜನ ಸತ್ತಾಗ ಯಾರಾದರೂ ಮೋದಿ ರಾಜೀನಾಮೆ ಕೇಳಿದ್ದರಾ? ಅವರು ಕೊಟ್ಟರಾ? ಸೇತುವೆ ಬಿದ್ದು ನೂರಾರು ಮಂದಿ ಸತ್ತು ಹೋದರಲ್ಲಾ, ಆಗ ರಾಜೀನಾಮೆ ಕೇಳಿದರಾ? ಬಿಜೆಪಿಯವರು ಕೇವಲ ರಾಜಕೀಯ ಉದ್ದೇಶಕ್ಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು.
‘ಕ್ರಿಕೆಟ್ ಮೈದಾನವನ್ನು ಬೆಂಗಳೂರು ಹೊರವಲಯಕ್ಕೆ ಸ್ಥಳಾಂತರಿಸುವ ಸಂಬಂಧ ಪರಿಶೀಲಿಸಲಾಗುವುದು. ಅಗತ್ಯವಾದಷ್ಟು ಜಾಗ ಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
‘ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿರುವ ಸಂಬಂಧ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸುವಂತೆ ಡಿಐಜಿಗೆ ಸೂಚಿಸಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.