ADVERTISEMENT

ಬಿಹಾರ ಚುನಾವಣೆ ಹಣಕ್ಕಾಗಿ ಸಚಿವರ ಸಭೆ: ಆರ್‌.ಅಶೋಕ ಆರೋಪ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 15:31 IST
Last Updated 11 ಅಕ್ಟೋಬರ್ 2025, 15:31 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ‘ಬಿಹಾರದ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರನ್ನು ಔತಣಕೂಟಕ್ಕೆ ಆಹ್ವಾನಿಸಿರುವುದು ಹಣ ಸಂಗ್ರಹಕ್ಕಾಗಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸಚಿವರು ತಮ್ಮ ಇಲಾಖೆಯಿಂದ ಎಷ್ಟು ಕೊಡುತ್ತಾರೆ. ಯಾವ ಇಲಾಖೆಗೆ  ಎಷ್ಟು ಗುರಿ ನಿಗದಿ ಮಾಡಬೇಕು ಎನ್ನುವ ಕುರಿತು ಔತಣಕೂಟದಲ್ಲಿ ಚರ್ಚಿಸುತ್ತಾರೆ. ನಂತರ ಎಲ್ಲ ಹಣ ಒಗ್ಗೂಡಿಸಿ ಬಿಹಾರಕ್ಕೆ ಕಳುಹಿಸುತ್ತಾರೆ’ ಎಂದರು.

ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರ ಬಳಿ ₹300 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಸಿಕ್ಕಿದೆ. ಹಣ ಸಾಗಣೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಚಿನ್ನದ ರೂಪದಲ್ಲಿ ಬಿಹಾರಕ್ಕೆ ಸಾಗಿಸಲಾಗುತ್ತಿದೆ. ರಾಜ್ಯದ ಚಿನ್ನವನ್ನು ಬಿಹಾರಕ್ಕೆ ಕಳಿಸಲು ಸಂಚು ನಡೆಯುತ್ತಿದೆ ಎಂದು ದೂರಿದರು.

ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್‌ಗೆ ಮನವರಿಕೆಯಾಗಿದೆ. ಅದಕ್ಕಾಗಿಯೇ ‘ಬಿಜೆಪಿ ಚುನಾವಣೆ ಬಹಿಷ್ಕಾರ ಮಾಡಲಿ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸವಾಲು ಒಪ್ಪುತ್ತೇವೆ. ಅವರೂ ಬಿಹಾರದಲ್ಲಿ ಮತ ಕಳವು ನಡೆದಿದೆ ಎಂಬ ಆರೋಪ ಮಾಡಿದ್ದಾರೆ. ಹಾಗಾದರೆ ಅವರೂ ಬಿಹಾರ ಚುನಾವಣೆ ಬಹಿಷ್ಕಾರ ಮಾಡಬೇಕು ಎಂದು ಮರು ಸವಾಲು ಹಾಕಿದರು. 

ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಚಟುವಟಿಕೆ ಗಮನಿಸಿದರೆ ನವೆಂಬರ್‌ ಕ್ರಾಂತಿ ಖಚಿತ. ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಕ್ಷಣಗಣನೆ ಆರಂಭವಾಗಿದೆ. ಹಾಗಾಗಿಯೇ, ಸಚಿವರು, ಶಾಸಕರು ನೋಟಿಸ್‌ಗೂ ಬಗ್ಗದೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.