
(ಸಂಗ್ರಹ ಚಿತ್ರ)
ಬೆಂಗಳೂರು: ‘ಸದನದಲ್ಲಿ ಬಟ್ಟೆ ಹರಿದುಕೊಂಡು ಕೈ ಕೈ ಮಿಲಾಯಿಸಿದ, ನೀಲಿ ಚಿತ್ರ ವೀಕ್ಷಿಸಿದ, ಸಭಾಪತಿಗಳ ಕಾಗದ ಹರಿದು ಮುಖದ ಮೇಲೆ ಬಿಸಾಕಿದ ಬಿಜೆಪಿಯವರಿಗೆ ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು ಕಿಂಚಿತ್ತಾದರೂ ನೈತಿಕತೆ ಇದೆಯೇ’ ಎಂದು ಶಾಸಕ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಂಟಿ ಸದನವನ್ನು ಉದ್ದೇಶಿಸಿ ಚುಟುಕು ಭಾಷಣ ಮುಗಿಸಿ ನಿರ್ಗಮಿಸುವ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಕಾಂಗ್ರೆಸ್ ಸದಸ್ಯರುಗಳು ಅವರನ್ನು ಅಡ್ಡಗಟ್ಟಿ, ತಳ್ಳಾಡಿ ನೂಕುನುಗ್ಗಲು ಉಂಟು ಮಾಡಿ, ರಾಜ್ಯಪಾಲರಿಗೆ ಆಗೌರವ ತೋರಿದ್ದಾರೆ . ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಹರಿಪ್ರಸಾದ್, ‘ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು @BJP4Karnataka ಪಕ್ಷದವರಿಗೆ ಕಿಂಚಿತ್ತಾದರೂ ನೈತಿಕತೆ ಇದೆಯೇ?’ ಎಂದಿದ್ದಾರೆ.
‘ಸದನದಲ್ಲಿ ಬಟ್ಟೆ ಹರಿದುಕೊಂಡು, ಕೈ ಕೈ ಮಿಲಾಯಿಸಿಕೊಂಡು ಗೂಂಡಾಗಳಂತೆ ವರ್ತಿಸಿದ ಮಹಾನುಭಾವರು ಯಾವ ಪಕ್ಷದವರು? ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಸದನದಲ್ಲೇ ನೀಲಿ ಚಿತ್ರಗಳನ್ನು ವೀಕ್ಷಿಸಿ ದೇಶದ ಜನರೆದುರು ರಾಜ್ಯದ ಮಾನ ಕಳೆದವರು ಯಾವ ಪಕ್ಷದವರು? ಸಭಾಪತಿಗಳ ಮುಖದ ಮೇಲೆ ಕಾಗದ ಪತ್ರಗಳನ್ನು ಹರಿದು ಬಿಸಾಕಿ ಅವಮಾನ ಮಾಡಿ ಸದನದಿಂದಲೇ ಉಚ್ಛಾಟಿತರಾದವರು ಯಾವ ಪಕ್ಷದವರು? ಇಂತಹ ಶಿಸ್ತು, ಸಂಸ್ಕಾರ, ಗೌರವ, ಘನತೆ ತಂದುಕೊಟ್ಟಿರುವ ಎಲ್ಲರೂ ನಮ್ಮ ಪಕ್ಷದವರೇ ಎಂದು ಎದೆ ತಟ್ಟಿ ಹೇಳುವ ಧೈರ್ಯ ಬಿಜೆಪಿಯವರಿಗೆ ಇದೆಯಾ?’ ಎಂದಿದ್ದಾರೆ.
‘ಸಂವಿಧಾನ ಹುದ್ದೆಯಲ್ಲಿರುವ ರಾಜ್ಯಪಾಲರ ಹುದ್ದೆಯನ್ನೇ ದುರಪಯೋಗಪಡಿಸಿಕೊಂಡು ರಾಜ್ಯ ರಾಜಕಾರಣದಲ್ಲೇ ಅತ್ಯಂತ ಕರಾಳ ದಿನವನ್ನು ಸೃಷ್ಟಿ ಮಾಡಿರುವ ಬಿಜೆಪಿ ನಾಯಕರಿಗೆ ಸಂವಿಧಾನದ ಮೌಲ್ಯಗಳ ಬಗ್ಗೆ ಮಾತಾನಾಡಲು ನೈತಿಕತೆ ಇಲ್ಲ. ರಾಜ್ಯಪಾಲರು ರಾಜ್ಯದ ತೆರಿಗೆಯ ಹಣದಿಂದ ಅಧಿಕಾರ ಅನುಭವಿಸುತ್ತಿದ್ದಾರೆಯೇ ಹೊರತು ‘ನಾಗಪುರ’ದಲ್ಲಿರುವ ನೊಂದಣಿಯೇ ಆಗದ ಸಂಘಟನೆಗೆ ಬರುವ ಬಿಟ್ಟಿ ಹಣದಿಂದಲ್ಲ’ ಎಂದು ಕಿಡಿಯಾಡಿದ್ದಾರೆ.
‘ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿದರೆ ರಾಜ್ಯಪಾಲರೇ ಇರಲಿ, ಸಾಂವಿಧಾನಿಕ ಹುದ್ದೆಯಲ್ಲೇ ಇರಲಿ ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಲೇ ಇರುತ್ತೇವೆ. ಬಿಜೆಪಿಯವರಿಂದ ನೈತಿಕತೆ ಕಲಿಯುವ ದಾರಿದ್ರ್ಯ ನಮಗೆ ಬಂದಿಲ್ಲ, ಬರುವುದೂ ಇಲ್ಲ’ ಎಂದು ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ತಮ್ಮ ಪೋಸ್ಟ್‌ಗೆ 2012ರ ಫೆ. 9ರಂದು ಪ್ರಜಾವಾಣಿ ಅಂತರ್ಜಾಲ ಪುಟದಲ್ಲಿ ಪ್ರಕಟವಾದ ‘ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ: 18 ಬಿಜೆಪಿ ಶಾಸಕರು 6 ತಿಂಗಳು ಅಮಾನತು! ಯಾರೆಲ್ಲಾ?’ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.