ADVERTISEMENT

ಪರಿಶಿಷ್ಟರನ್ನು ಬಡವರನ್ನಾಗಿಸುವುದು ಕಾಂಗ್ರೆಸ್‌ ಕುತಂತ್ರ: ಪಿ.ರಾಜೀವ್‌

ಬೈರತಿ ಬಸವರಾಜ್ ಮನೆಯಲ್ಲಿ ‘ಭೀಮ ಸಂಗಮ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 23:43 IST
Last Updated 13 ಜನವರಿ 2025, 23:43 IST
ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್ ಅವರ ಮನೆಯಲ್ಲಿ ಸೋಮವಾರ ಭೀಮ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಅವರು ಉದ್ಘಾಟಿಸಿದರು. ಎಸ್‌.ಹರೀಶ್‌, ಮುನಿಕೃಷ್ಣ, ಗೀತಾ ವಿವೇಕಾನಂದ ಮತ್ತಿತರರು ಇದ್ದರು.
ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್ ಅವರ ಮನೆಯಲ್ಲಿ ಸೋಮವಾರ ಭೀಮ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಅವರು ಉದ್ಘಾಟಿಸಿದರು. ಎಸ್‌.ಹರೀಶ್‌, ಮುನಿಕೃಷ್ಣ, ಗೀತಾ ವಿವೇಕಾನಂದ ಮತ್ತಿತರರು ಇದ್ದರು.   

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಸದಾ ತಮ್ಮ ಮತ ಬ್ಯಾಂಕ್‌ ಆಗಿರಬೇಕು. ಅದಕ್ಕಾಗಿ ಈ ಸಮುದಾಯಗಳು ಬಡತನದಲ್ಲೇ ಇರಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ರಹಸ್ಯ ಕಾರ್ಯಸೂಚಿ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಟೀಕಿಸಿದರು.

ಬಿಜೆಪಿ ಆರಂಭಿಸಿರುವ ‘ಭೀಮ ಸಂಗಮ’ ಅಭಿಯಾನದ ಅಂಗವಾಗಿ ಶಾಸಕ ಬೈರತಿ ಬಸವರಾಜ್ ಅವರ ಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯಲ್ಲಿ ಈ ಸಮುದಾಯಗಳಿಗೆ ಮೀಸಲಿಟ್ಟ ಹಣದಲ್ಲಿ ಕಳೆದ ಸಾಲಿನಲ್ಲಿ ₹11 ಸಾವಿರ ಕೋಟಿ ಮತ್ತು ಈ ಸಾಲಿನಲ್ಲಿ ₹14 ಸಾವಿರ ಕೋಟಿ ಸೇರಿ ಒಟ್ಟು ₹25 ಸಾವಿರ ಕೋಟಿಯನ್ನು ಕಾಂಗ್ರೆಸ್‌ನವರು ದುರ್ಬಳಕೆ ಮಾಡಿಕೊಂಡಿದ್ದಾರೆ. ₹25 ಸಾವಿರ ಕೋಟಿಯನ್ನು ಈ ವರ್ಗಗಳ ಕೈಗಾರಿಕಾ ಅಭಿವೃದ್ಧಿಗೆ ಕೊಟ್ಟಿದ್ದರೆ  ಸಾವಿರಾರು ದಲಿತ ಕುಟುಂಬದವರು ಉದ್ಯಮಿಗಳು ಆಗುತ್ತಿದ್ದರು. ದಲಿತ ಯುವಕರಿಗೆ ಕೆಲಸ ಸಿಗುತ್ತಿತ್ತು ಎಂದರು.

ADVERTISEMENT

ಶಾಸಕ ಬೈರತಿ ಬಸವರಾಜ್ ಮಾತನಾಡಿ, ‘ಸಂವಿಧಾನ ಬದಲಿಸುತ್ತಾರೆ ಮತ್ತು ಸಂವಿಧಾನ ರದ್ದು ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡರು ಹಾಗೂ ಅವರ ಬೆಂಬಲಿಗರು ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ. ಯಾವತ್ತೂ, ಯಾರೂ ಕೂಡ ಸಂವಿಧಾನವನ್ನು ರದ್ದು ಮಾಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಬಿಜೆಪಿ ದಲಿತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಕಾಂಗ್ರೆಸ್‌ ಪಕ್ಷ ಪಿತೂರಿ ಮಾಡಿದೆ. ನಿಜವಾದ ವಿಚಾರಗಳನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ’ ಎಂದು ಹೇಳಿದರು.

‘ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸೂಚನೆಯಂತೆ ರಾಜ್ಯದಲ್ಲಿ ಸಂವಿಧಾನದ ಅರಿವು, ಜಾಗೃತಿ ಅಭಿಯಾನ ನಡೆಯಲಿದೆ. ಅದರ ಮೊದಲ ಕಾರ್ಯಕ್ರಮ ನಮ್ಮ ಮನೆಯಲ್ಲಿ ನಡೆದಿದೆ’ ಎಂದರು.

ಬಿಜೆಪಿ ನಗರ ಘಟಕದ ಜಿಲ್ಲಾಧ್ಯಕ್ಷ ಎಸ್‌.ಹರೀಶ್‌, ಕಾರ್ಯಕ್ರಮದ ಸಂಚಾಲಕ ಮುನಿಕೃಷ್ಣ, ರಾಜ್ಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಸದಾಶಿವ, ಚಿದಾನಂದ, ಮುನಿರಾಜು, ಸಂಪತ್, ಮಂಜುಳಾ ಶ್ರೀನಿವಾಸ್, ರಮೇಶ್, ಮಂಡಲದ ಪದಾಧಿಕಾರಿಗಳು ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.