ADVERTISEMENT

ಅಧಿವೇಶನಕ್ಕೆ ಬಂದಿರೊ? ಪಾರ್ಟಿ ಮಾಡಲು ಬಂದಿರೊ? ಕೈ ನಾಯಕರ ವಿರುದ್ಧ ಬಿವೈವಿ ಕಿಡಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 9:48 IST
Last Updated 12 ಡಿಸೆಂಬರ್ 2025, 9:48 IST
<div class="paragraphs"><p>ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಳಗಾವಿ: 'ಕಾಂಗ್ರೆಸ್ ನಾಯಕರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಇಲ್ಲಿಯೂ 'ಡಿನ್ನರ್ ಪಾರ್ಟಿ' ಮುಂದುವರಿಸಿರುವುದು ನಾಡಿನ ಜನತೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ನಿವಿಲ್ಲಿ ಅಧಿವೇಶನಕ್ಕೆ ಬಂದಿದ್ದೀರೋ ಡಿನ್ನರ್ ಪಾರ್ಟಿಗೆ ಬಂದಿದ್ದೀರೋ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 'ನಿಮ್ಮ ನಾಯಕತ್ವದ ಸಮಸ್ಯೆ ಬಗೆಹರಿಸಿಕೊಂಡು, ನಂತರ ಬೆಳಗಾವಿ ಅಧಿವೇಶನಕ್ಕೆ ಬರಬೇಕು ಎಂದು ನಾವು ಮೊದಲೇ ತಕರಾರು‌ ಮಾಡಿದ್ದೇವು.10 ದಿನ ಮುಂಚಿತವಾಗಿ ಮತ್ತೆ ಸ್ಪಷ್ಟವಾಗಿ ಹೇಳಿದ್ದೇವು. ಇವರು ಜನಾಧಿವೇಶನವನ್ನು ತಮ್ಮ ಕುರ್ಚಿ ಕಾಪಾಡುವ ಅಧಿವೇಶನ ಮಾಡಿಕೊಳ್ಳುತ್ತಿದ್ದಾರೆ' ಎಂದರು.

ADVERTISEMENT

'ನೀವೇನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಲ್ಲ. ಇಡೀ ರಾಜ್ಯದ ಮುಖ್ಯಮಂತ್ರಿ. ಇಷ್ಟೊಂದು ಗೊಂದಲ ಇಟ್ಟುಕೊಂಡು ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದು ಬೇಡ. ಅಧಿವೇಶನ‌ ಮುಂದೂಡಿ ಎಂದು ಕೂಡ ಸಲಹೆ ನೀಡಿದ್ದೇವು' ಎಂದೂ ಹೇಳಿದರು.

'ಕಳೆದ ನಾಲ್ಕು ತಿಂಗಳಿನಿಂದ ಪದೇ ಪದೇ ಡಿನ್ನರ್ ಮೀಟಿಂಗ್ ಮಾಡಿಕೊಂಡು ಬಂದಿದ್ದಾರೆ. ಇದೇ ಕಾರಣದಿಂದ ಕಬ್ಬು ಬೆಳೆಗಾರರ ಹೋರಾಟ ವಿಕೋಪಕ್ಕೆ ಹೋಯಿತು‌. ರಾಜ್ಯದ ಜನರ ಸಮಸ್ಯೆಗಳ ಕುರಿತು ಚಿಂತನೆ ಮಾಡಲು ಈ ಸರ್ಕಾರ ಸಮಯ ಕೊಡಲಿಲ್ಲ. ಡಿನ್ನರ್, ಲಂಚ್ ಮೀಟಿಂಗ್ ನಲ್ಲಿ ಕಬ್ಬು, ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ ಅಂದರೆ ಅದೂ ಇಲ್ಲ. ಕೇವಲ ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ ನೇತೃತ್ವದ ತಂಡವು ಹೇಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು‌ ಕುರ್ಚಿಯಿಂದ ಬೀಳಿಸಬೇಕು ಎಂದು ತಂತ್ರಗಾರಿಕೆ ರೂಪಿಸಲು ಮೀಟಿಂಗ್ ಮಾಡುತ್ತಿದೆ. ಇದರ ನಡುವೆ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು. ರೈತರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ' ಎಂದು ವಿಜಯೇಂದ್ರ ಕಿಡಿಕಾರಿದರು.

ಜನ ಕಂಗಾಲು

‘ಕುರ್ಚಿಗಾಗಿ ಕಾಂಗ್ರೆಸ್ಸಿಗರು‌ ನಡೆಸಿದ ಗುದ್ದಾಟದಲ್ಲಿ ಜನ ಕಂಗಾಲಾಗಿ ದ್ದಾರೆ. ಅಭಿವೃದ್ಧಿ ಕುಂಠಿತ ವಾಗಿದೆ. ರಾಜ್ಯವೇ ಅಭಿವೃದ್ಧಿ ಕಾಣದ ಸ್ಥಿತಿ ಇದೆ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ದವರಿಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಪಕ್ಷದವರ ಕಾದಾಟ ರಾಜ್ಯದ ಜನರಿಗೆ ಅವಶ್ಯಕತೆ ಇಲ್ಲ. ಅಧಿಕಾರ ಹಂಚಿಕೆ ಮಾಡುತ್ತಿರೋ ಅಥವಾ ನೀವೇ ಇಟ್ಟುಕೊಳ್ಳುತ್ತೀರೋ ಎಂಬುದು ಪ್ರಶ್ನೆ ಅಲ್ಲ. ಅದಕ್ಕೆ ಒಂದು ತಡೆ ಹಾಕಲು ಆಗುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಯಾವುದೇ ತೊಂದರೆ ಇಲ್ಲ, ನನ್ನ ಕುರ್ಚಿ ಭದ್ರವಾಗಿದೆ ಎಂದು ಸಿ.ಎಂ. ಹೇಳುತ್ತಾರೆ. ಇನ್ನೊಂದೆಡೆ ಡಿನ್ನರ್, ಲಂಚ್ ಪಾರ್ಟಿ ಮಾಡುತ್ತಾರೆ. ಇದಕ್ಕೇನು ಅರ್ಥವಿದೆ’ ಎಂದೂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ಸರ್ಕಾರದ ವಿರುದ್ಧ ಯುವಕರು, ಸಾರ್ವಜನಿಕರು ಹೋರಾಟಕ್ಕೆ ಇಳಿದಿದ್ದಾರೆ. ಖಾಲಿ ಇರುವ ಎರಡು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ತುಂಬಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಇನ್ನೂ ಎರಡೂವರೆ ವರ್ಷ ಸಮಯ ಇದೆ ಎನ್ನು‌ತ್ತಾರೆ’ ಎಂದು ದೂರಿದರು.

‘ಉತ್ತರ ಕರ್ನಾಟಕದಲ್ಲಿ ಅನೇಕ ಸಮಸ್ಯೆಗಳಿವೆ. ಇದರ ಜೊತೆಗೆ ರೈತರ, ದಲಿತರ ಸಮಸ್ಯೆಗಳು ಸಾಕಷ್ಟಿವೆ. ಒಳ ಮೀಸಲಾತಿ ನೆಪವೊಡ್ಡಿ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೇ ಸರ್ಕಾರ ಪರಿತಪಿಸುತ್ತಿದೆ’ ಎಂದರು.

‘ಪ್ರತ್ಯೇಕ ರಾಜ್ಯ ಬೇಡಿಕೆ ಸರಿಯಲ್ಲ’

‘ನಮ್ಮ ಹಿರಿಯರು ಬಹಳ ಆಲೋಚಿಸಿ ಭಾಷಾವಾರು ಪ್ರಾಂತ ರಚನೆ ಮಾಡಿದ್ದಾರೆ. ಕನ್ನಡ ಭಾಷೆ ಮಾತನಾಡುವವರೆಲ್ಲ ಒಂದೇ ಸೂರಿನಡಿ ಇರಬೇಕು ಎಂಬ ಸದುದ್ದೇಶದಿಂದ ಕನ್ನಡನಾಡು ಮಾಡಿದ್ದಾರೆ.‌ ಉತ್ತರ ಕರ್ನಾಟಕದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಆಗಬೇಕು ಎನ್ನುವುದು ನಿಜ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಪ್ರತಿಕ್ರಿಯಿಸಿದ ಅವರು, ‘ಈ ಭಾಗದ ಎಲ್ಲ ಪಕ್ಷಗಳ ಶಾಸಕರೂ ತಮ್ಮ ಕ್ಷೇತ್ರದ ಮೇಲಿನ ಕಳಕಳಿಯಿಂದಲೇ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉ.ಕ. ಭಾಗದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಆಗಬೇಕಿದೆ. ಹಾಗೆಂದು ಇಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎನ್ನಲು ಬರುವುದಿಲ್ಲ’ ಎಂದರು.

‘ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಪಕ್ಷ. ಇಲ್ಲಿ ವಾಕ್‌ಸ್ವಾತಂತ್ರ್ಯ ಇದೆ. ಆದರೆ, ಬಿಜೆಪಿಯಲ್ಲಿ ಸರ್ವಾಧಿಕಾರಿ ವ್ಯವಸ್ಥೆ ಇದೆ.‌ ಯಾರಾದರೂ ತುಟಿ ಪಿಟಕ್ ಎಂದರೆ ಮುಂದೆ ಕ್ರಮ ಆಗುತ್ತದೆ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಹಾಗಾಗಿ, ಇಲ್ಲಿ ಮಾತನಾಡುತ್ತಾರೆ’ ಎಂದರು.

‘ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ನೀಡಿ’

‘ಉತ್ತರ ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕಳೆದ 30 ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ. ನನ್ನ ಸಹೋದರ ಎರಡು ಬಾರಿ ಶಾಸಕರಾಗಿದ್ದಾರೆ. ಈಗ ನಾನು ಶಾಸಕನಾಗಿದ್ದೇನೆ. ಸಚಿವ ಸ್ಥಾನ ನೀಡುವಂತೆ ನಮ್ಮ ಬೇಡಿಕೆ ಇದೆ’ ಎಂದು ಶಾಸಕ ಆಸಿಫ್‌ ಸೇಠ್‌ ಹೇಳಿದರು.

ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಈ ಭಾಗ ಅಭಿವೃದ್ಧಿ ಆಗಬೇಕು‌. ಶಾಸಕ ಭರಮಗೌಡ ಕಾಗೆ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಸದನದಲ್ಲಿ ಮಾತನಾಡಿದ್ದಾರೆ. ನಾನು ಬೆಳಗಾವಿ ಎರಡನೇ ರಾಜಧಾನಿ ಮಾಡಿ ಎಂದು ಹೇಳಿದ್ದೇನೆ. ಬ್ರ್ಯಾಂಡ್ ಬೆಂಗಳೂರು ರೀತಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.