
ದಗ/ಬೆಂಗಳೂರು: ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾರ್ಚ್ 2ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಶಾಸಕ ಮತ್ತು ಆಪ್ತ ಸಹಾಯಕರಾದ ಮಂಜುನಾಥ ವಾಲ್ಮೀಕಿ, ಗುರು ನಾಯ್ಕ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಶನಿವಾರ ತಡರಾತ್ರಿ 1.30ರವರೆಗೂ, ಗದಗ ಜಿಲ್ಲೆ ಲಕ್ಷ್ಮೇಶ್ವರ ದಲ್ಲಿರುವ ಶಾಸಕರ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲಿರುವ ಅವರ ಕಚೇರಿಯಲ್ಲಿಯೇ ತೀವ್ರ ವಿಚಾರಣೆಗೆ ಒಳಪಡಿಸಿದರು.
ಬಳಿಕ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಶನಿವಾರ ರಾತ್ರಿ 2ಕ್ಕೆ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದರು. ಭಾನುವಾರ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿದರು.
ಬೆಂಗಳೂರಿನ ನ್ಯಾಯಾಂಗ ಬಡಾವಣೆಯಲ್ಲಿ ಇರುವ ನ್ಯಾಯಾಧೀಶರ ನಿವಾಸದಲ್ಲಿ ಚಂದ್ರು ಲಮಾಣಿ ಹಾಗೂ ಇಬ್ಬರು ಆಪ್ತರನ್ನು ಹಾಜರುಪಡಿಸಲಾಯಿತು. ನ್ಯಾಯಾಧೀಶರ ಆದೇಶದಂತೆ ಮೂವರನ್ನು ಬಳಿಕ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು.
‘ಶಾಸಕ ಡಾ.ಚಂದ್ರು ಲಮಾಣಿ ಅವರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿರುವ ಗುತ್ತಿಗೆದಾರ ವಿಜಯ್ ಪೂಜಾರ ಅವರು ಗದಗ ತಾಲ್ಲೂಕು ಮುಳಗುಂದ ಪಟ್ಟಣದ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಎಸ್‌ಸಿ ಘಟಕದ ಕಾರ್ಯದರ್ಶಿ. ಶಾಸಕರ ಮೇಲೆ ನಡೆದಿರುವ ಲೋಕಾಯುಕ್ತ ದಾಳಿ ಹಿಂದೆ ರಾಜಕೀಯ ಷಡ್ಯಂತ್ರ ನಡೆದಿದೆ’ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ, ಕಾಂಗ್ರೆಸ್ ಮುಖಂಡರ ವಿರುದ್ಧ ಘೋಷಣೆ ಕೂಗಿದರು.
ಶಾಸಕ ಡಾ.ಚಂದ್ರು ಲಮಾಣಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬೆನ್ನಲ್ಲೇ, ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಭುಗಿಲೆದ್ದಿದೆ. ‘ಶಾಸಕರ ವಿರುದ್ಧ ಕಾಂಗ್ರೆಸ್ ನಾಯಕರು ಷಡ್ಯಂತ್ರ ನಡೆಸಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ.
ಲಕ್ಷ್ಮೇಶ್ವರ ತಾಲ್ಲೂಕಿನ ಸಂಕದಾಳದಲ್ಲಿ ತಡೆಗೋಡೆ ನಿರ್ಮಿಸುವ ಎರಡು ಕಾಮಗಾರಿಗಳಿಗೆ ಸಂಬಂಧಿಸಿ ಗುತ್ತಿಗೆದಾರನ ಬಳಿ ಶೇ 12ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ ₹5 ಲಕ್ಷ ಲಂಚ ಪಡೆಯುವ ವೇಳೆ ಶಾಸಕ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.
ಲಂಚ ಪ್ರಕರಣದ ಹಿಂದೆಯೇ, ಲಂಬಾಣಿ ಸಮಾಜದ ಸ್ವಾಮೀಜಿಯೊಬ್ಬರದು ಎನ್ನಲಾದ ಆಡಿಯೊ ಮತ್ತು ಶಾಸಕ ಡಾ.ಚಂದ್ರು ಲಮಾಣಿ ಅವರು ಗುತ್ತಿಗೆದಾರ ವಿಜಯ್ ಪೂಜಾರಗೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೊ ಜಾಲತಾಣದಲ್ಲಿ ಸದ್ದುಮಾಡಿದೆ.
ಶಾಸಕ ಹಾಗೂ ಗುತ್ತಿಗೆದಾರನ ನಡುವಿನ ಮಾತುಕತೆಯ ಆಡಿಯೊವನ್ನು ಪೊಲೀಸರು, ಎರಡು ದಿನದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್) ಕಳುಹಿಸಲಿದ್ದಾರೆ. ಶಾಸಕರು ಗುತ್ತಿಗೆದಾರನ ಜೊತೆ ಕಮಿಷನ್ ಬಗ್ಗೆ ಮಾತನಾಡಿದ ಆಡಿಯೊ ಸೇರಿ ಮಹತ್ವದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಸಕ ಚಂದ್ರು ಲಮಾಣಿ ಅವರ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆ ಸರಿಯಾದ ತನಿಖೆ ನಡೆಸಲಿದೆ. ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಚಂದ್ರು ಅವರನ್ನು ಲೋಕಾಯುಕ್ತ ದಾಳಿಯಲ್ಲಿ ಸಿಲುಕಿಸಿರುವುದು ಸಂಚು. ನಮ್ಮ ಪಕ್ಷ ಇಂತಹ ವಿಚಾರಗಳನ್ನು ಸಹಿಸಲ್ಲ. ಕಾಂಗ್ರೆಸ್ ನವರು ಎಲ್ಲರನ್ನು ಟಾರ್ಗೆಟ್ ಮಾಡಿದ್ದಾರೆಛಲವಾದಿ ನಾರಾಯಣಸ್ವಾಮಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ
ಬಂಧನಕ್ಕೆ ಒಳಗಾದ ಶಾಸಕರು
ಬಿ. ನಾಗೇಂದ್ರ, ಕಾಂಗ್ರೆಸ್ (ವಾಲ್ಮೀಕಿ ಹಗರಣ),ಜಾಮೀನು
ಸತೀಶ್ ಸೈಲ್, ಕಾಂಗ್ರೆಸ್ (ಅಕ್ರಮ ಅದಿರು ಸಾಗಣೆ), ಜಾಮೀನು
ವಿನಯ್ ಕುಲಕರ್ಣಿ, ಕಾಂಗ್ರೆಸ್ (ಜಿ.ಪಂ ಸದಸ್ಯನ ಕೊಲೆ ಆರೋಪ),ಜೈಲಿನಲ್ಲಿ
ಬೈರತಿ ಬಸವರಾಜು, ಬಿಜೆಪಿ (ಬಿಕ್ಲುಶಿವು ಕೊಲೆ ಪ್ರಕರಣದ ಆರೋಪ),ಜೈಲಿನಲ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.