
ಡಿ.ಕೆ.ಶಿವಕುಮಾರ್
ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಕಳವು ಪ್ರಕರಣ ತನಿಖೆ ನಡೆಸಿರುವ ಸಿಐಡಿಯ ವಿಶೇಷ ತನಿಖಾ ತಂಡ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಬಿಜೆಪಿಯು ಮತ ಕಳವು ಮಾಡಿರುವುದು ದೃಢಪಟ್ಟಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆಳಂದ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಮತ್ತು ತಂಡ ಅಕ್ರಮ ನಡೆಸಿರುವುದು ಸತ್ಯ. ಈ ಕುರಿತು ಕಾಂಗ್ರೆಸ್ ಶಾಸಕರು ಬೆಳಗಾವಿ ಅಧಿವೇಶನದಲ್ಲೂ ದನಿ ಎತ್ತಲಿದ್ದಾರೆ. ಇದು ಕೇವಲ ಕರ್ನಾಟಕದ ದನಿಯಲ್ಲ. ಇಡೀ ಭಾರತದ ದನಿ. ಕರ್ನಾಟಕದಲ್ಲೂ ಚಿಲುಮೆ ಸಂಸ್ಥೆ ಮೂಲಕ ಸಾವಿರಾರು ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಿ ಅಕ್ರಮ ಎಸಗಲಾಗಿತ್ತು. ಬಿಜೆಪಿ ಸಂಚಿನ ನಡುವೆಯೂ ಜನರ ಕೃಪೆಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ’ ಎಂದರು.
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಲಹೆಯಂತೆ ಪ್ರತಿ ಕ್ಷೇತ್ರದಲ್ಲೂ ‘ಕಾನೂನು ಬ್ಯಾಂಕ್’ ಪ್ರಾರಂಭ ಮಾಡಬೇಕು. ದೆಹಲಿಯಲ್ಲಿ ಡಿ.14ರಂದು ಮತ ಕಳವು ಪ್ರಕರಣಗಳ ವಿರುದ್ಧ ಹೋರಾಟ ನಡೆಯಲಿದೆ. ಪ್ರತಿಭಟನೆಯಲ್ಲಿ ರಾಜ್ಯದ 100ಕ್ಕೂ ಹೆಚ್ಚು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಭಾಗವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
ಬಿಜೆಪಿ ‘ಮತಕಳವಿನ ಕಾರ್ಖಾನೆ’– ಪ್ರಿಯಾಂಕ್: ‘ಬಿಜೆಪಿಯ ವ್ಯವಸ್ಥಿತ ‘ಮತಕಳವಿನ ಕಾರ್ಖಾನೆ’ ಸಾಕ್ಷಿ ಸಮೇತ ರುಜುವಾತಾಗಿದೆ. ಆಳಂದ ಕ್ಷೇತ್ರದ ಮತದಾರರ ಹೆಸರನ್ನು ತೆಗೆದುಹಾಕಲು ನಡೆಸಲಾಗಿದ್ದ ವ್ಯವಸ್ಥಿತ ಸಂಚು ಬಯಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ ಮಾಡಿರುವ ಅವರು, ‘ಆಳಂದ ಮತ ಕಳವು ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನೇಮಿಸಿದ್ದ ಎಸ್‌ಐಟಿ ವಿಸ್ತ್ರತ ತನಿಖೆ ವೇಳೆ ಬಿಜೆಪಿಯ ಮಹಾ ಮತದ್ರೋಹದ ಮಾಹಿತಿ ಲಭ್ಯವಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.