ADVERTISEMENT

ಅನ್ನದಾತರಿಗೆ ದಕ್ಕದ ಬೆಲೆ ಏರಿಕೆ ಪ್ರಯೋಜನ: ಗ್ರಾಹಕರಿಗೆ ಹೊರೆ ರೈತರಿಗೆ ಲುಕ್ಸಾನು

ಸಚ್ಚಿದಾನಂದ ಕುರಗುಂದ
Published 15 ಅಕ್ಟೋಬರ್ 2021, 20:36 IST
Last Updated 15 ಅಕ್ಟೋಬರ್ 2021, 20:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದ್ದರಿಂದ ಗ್ರಾಹಕರು ತತ್ತರಿಸುತ್ತಿದ್ದರೆ, ಕಷ್ಟಪಟ್ಟು ತರಕಾರಿ ಬೆಳೆಯುವ ರೈತರಿಗೂ ಇದರ ಲಾಭ ಸಿಗುತ್ತಿಲ್ಲ. ಈ ಲಾಭದ ಹಣ ನೇರವಾಗಿ ದಲ್ಲಾಳಿಗಳ ಜೇಬಿಗೆ ಸೇರುತ್ತಿದೆ.

ಸುತ್ತಮುತ್ತಲಿನ ಜಿಲ್ಲೆಗಳಿಂದ ಬೆಂಗಳೂರಿನ ಮಾರುಕಟ್ಟೆಗೆ ತರಕಾರಿ ತರುವ ಕೆಲವು ರೈತರನ್ನು ಮಾತನಾಡಿಸಿದಾಗ ಉತ್ಪನ್ನವನ್ನು ಸಿಕ್ಕಿದ ದರಕ್ಕೆ ಮಾರಿ ಹೋಗಬೇಕಾದ ಪರಿಸ್ಥಿತಿಯನ್ನು ಅವರು ಬಿಚ್ಚಿಟ್ಟರು.

ಉದಾಹರಣೆಗೆ 12 ಕೆ.ಜಿ. ಟೊಮೆಟೊ ಬಾಕ್ಸ್‌ಗೆ ₹300ರಿಂದ ₹500 ದರದಲ್ಲಿ ಮಧ್ಯವರ್ತಿಗಳು ರೈತರಿಂದ ಖರೀದಿಸುತ್ತಾರೆ. ಅಂದರೆ ಒಂದು ಕೆ.ಜಿಗೆ ಕನಿಷ್ಠ ₹25ರಿಂದ ₹41 ರೈತರಿಗೆ ಸಿಗುತ್ತದೆ. ಅಂತಿಮವಾಗಿಗ್ರಾಹಕರಿಗೆ ಪ್ರತಿ ಕೆ.ಜಿ.ಗೆ ₹80 ಕ್ಕೂ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ, ಸಾಗಣೆ, ಹಾಳಾಗುವ ಟೊಮೊಟೊದಮೌಲ್ಯ ಕಳೆದರೂ ಮಧ್ಯವರ್ತಿಗಳಿಗೆ ಪ್ರತಿ ಕೆ.ಜಿ.ಯ ಮೇಲೆ ಕನಿಷ್ಠ ₹30 ಲಾಭ ಸಿಗುತ್ತದೆ. ‘ಇಲ್ಲಿ ಗ್ರಾಹಕರಿಗೂ ಹೊರೆ, ನಮಗೂ ಲುಕ್ಸಾನು’ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

ADVERTISEMENT

‘ಸೂಪರ್‌ ಮಾರ್ಕೆಟ್‌ಗಳು ಸಹ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ‘ಗ್ರೇಡ್‌’ಗಳ ಅನ್ವಯ ಖರೀದಿಸುವ ವ್ಯವಸ್ಥೆ ಮಾಡಿಕೊಂಡಿವೆ. ಇವರಿಂದ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿರುವುದು ನಿಜ. ಆದರೆ, ಅವರು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ‘ಎ’ ಗ್ರೇಡ್‌ ಕೃಷಿ ಉತ್ಪನ್ನಗಳನ್ನು ಮಾತ್ರ ಸೂಪರ್‌ ಮಾರ್ಕೆಟ್‌ಗಳಲ್ಲಿ ಖರೀದಿಸುತ್ತಾರೆ. ಸಣ್ಣ ಕಪ್ಪುಚುಕ್ಕೆಗಳಿದ್ದರೂ ತಿರಸ್ಕರಿಸುತ್ತಾರೆ. ಇದರಿಂದ, ಗುಣಮಟ್ಟ ಕಡಿಮೆ ಇರುವ ಉತ್ಪನ್ನಗಳನ್ನು ಸಾಮಾನ್ಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ, ರೈತರು ಮತ್ತೆ ಮಧ್ಯವರ್ತಿಗಳ ಬಲೆಯಲ್ಲಿ ಸಿಲುಕುತ್ತಾರೆ’ ಎಂದು ದೇವನಹಳ್ಳಿಯ ರೈತ ಮಂಜುನಾಥ್‌ ಹೇಳಿದರು.

‘ಈರುಳ್ಳಿ ಬೆಲೆ ಹೆಚ್ಚಿಗೆಯಾಗಿದ್ದರೂ ಅದರಿಂದ ನಮಗೆ ಲಾಭವಾಗುತ್ತಿಲ್ಲ. ಈರುಳ್ಳಿ ಬೆಳೆಯಲು ಎಕರೆಗೆ ಕನಿಷ್ಠ ₹50 ಸಾವಿರ ಖರ್ಚಾಗುತ್ತದೆ. ಮೊದಲ ದರ್ಜೆಯ ಈರುಳ್ಳಿಗೆ ₹30, ಎರಡನೇ ದರ್ಜೆಗೆ ₹23 ಹಾಗೂ ಮೂರನೇ ದರ್ಜೆಗೆ ₹14 ಸಿಗುತ್ತದೆ. ನಾವು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ಮಾಡುತ್ತೇವೆ. ಸಾಗಾಣಿಕೆ ವೆಚ್ಚ ಎಲ್ಲವೂ ಸೇರಿದರೆ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. 2000 ದಿಂದಲೂ ಈರುಳ್ಳಿ ಬೆಳೆಯುತ್ತಿದ್ದೇವೆ. 2013 ರಲ್ಲಿ ಮತ್ತು 2019 ರಲ್ಲಿ ಎರಡು ವರ್ಷ ಮಾತ್ರ ಲಾಭವಾಗಿತ್ತು’ ಎಂದು ಚಿತ್ರದುರ್ಗ ಜಿಲ್ಲೆ ಡಿ.ಎಸ್‌.ಹಳ್ಳಿಯ ಈರುಳ್ಳಿ ಬೆಳೆಗಾರ ಮಲ್ಲಿಕಾರ್ಜುನ ತಿಳಿಸಿದರು.

‘ರಾಜ್ಯದಲ್ಲಿ ಎಲ್ಲ ಕಡೆ ಇದೇ ಸ್ಥಿತಿ ಇದೆ. ನಮ್ಮ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹550 ಕ್ಕೆ ಈರುಳ್ಳಿ ಮಾರಿದ್ದೇನೆ. ತೂಕದ ವ್ಯತ್ಯಾಸ, ಕಮಿಷನ್ ಎಲ್ಲವೂ ಲೆಕ್ಕ ಹಾಕಿದರೆ ಕಿಲೋಗೆ ನಮಗ ₹5 ಸಿಕ್ಕಿದೆ. ಆದರೆ ಪೇಟೆಯೊಳಗ ಮಾತ್ರ ಈರುಳ್ಳಿ ರೇಟ್ ಸಿಕ್ಕಾಪಟ್ಟೆ ಐತ್ರಿ’ ಎನ್ನುತ್ತಾರೆ ಹುನಗುಂದ ತಾಲ್ಲೂಕು ಚಿತ್ತಡವಾಡಗಿಯ ರೈತ ಸಂಗಮೇಶ.

ಸ್ಪರ್ಧಾತ್ಮಕ ಬೆಲೆ ಇದ್ದರೆ ಅನುಕೂಲ:‘ಬೆಲೆಗಳು ಸ್ಪರ್ಧಾತ್ಮಕವಾಗಿರಬೇಕು ಮತ್ತು ನ್ಯಾಯಯುತವಾಗಿದ್ದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎಪಿಎಂಸಿಯಲ್ಲಿ ಈಗ ಶೇಕಡ 70 ರಷ್ಟು ವಹಿವಾಟು ಕಡಿಮೆಯಾಗಿದೆ. ಎಪಿಎಂಸಿಗಳಲ್ಲಿನ ರಾಜಕೀಯ ಕಡಿಮೆ ಮಾಡಿ ಹೊಸ ಸ್ಪರ್ಶ ನೀಡುವುದು ಅಗತ್ಯವಿದೆಯೇ ಹೊರತು ಅವುಗಳನ್ನು ಮುಚ್ಚುವ ಪ್ರಯತ್ನ ಮಾಡಬಾರದು’ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಡುತ್ತಾರೆ.

‘ತೋಟಗಾರಿಕೆ ಮಹಾಮಂಡಳ ರಚಿಸಲಿ’

‘ಹಬ್ಬಗಳು ಬಂದಾಗ ತರಕಾರಿಗಳು, ಹೂವುಗಳ ಬೆಲೆ ಹೆಚ್ಚಾಗುವುದು ಸಾಮಾನ್ಯ. ಜತೆಗೆ, ಪೆಟ್ರೋಲ್‌, ಡೀಸೆಲ್‌ ದರವೂ ಏರಿಕೆಯಾಗಿರುವುದರಿಂದ ಸಾಗಾಣಿಕೆ ವೆಚ್ಚವೂ ಹೆಚ್ಚಾಗಿದೆ. ಬೆಲೆ ಏರಿಕೆಯ ಲಾಭ ರೈತರಿಗೆ ದೊರೆಯಬೇಕು. ಹೀಗಾಗಿಯೇ ರೈತರಿಗೆ ಅನುಕೂಲವಾಗುವಂತೆ ಕರ್ನಾಟಕ ತೋಟಗಾರಿಕೆ ಮಾರಾಟ ಮಹಾಮಂಡಳಿ ರಚಿಸುವಂತೆ ಸರ್ಕಾರಕ್ಕೆ ಕೋರಿದ್ದೇವೆ’ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.