ADVERTISEMENT

ಬಾಯಿ ಮುಚ್ಚಿ ಎಂದು ಡಿಕೆಶಿ ಹೇಳಿದ್ದು ನನ್ನೊಬ್ಬನಿಗೇ ಅಲ್ಲ: ಜಮೀರ್ ಅಹ್ಮದ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 11:05 IST
Last Updated 23 ಜುಲೈ 2022, 11:05 IST
ಜಮೀರ್ ಅಹ್ಮದ್
ಜಮೀರ್ ಅಹ್ಮದ್   

ಬೆಳಗಾವಿ: ‘ಎಲ್ಲರೂ ಬಾಯಿ ಮುಚ್ಚಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ್ದರಿಂದ ಆ ಹಕ್ಕು ಅವರಿಗೆ ಇದೆ. ವೈಯಕ್ತಿಕವಾಗಿ ನನಗೇ ಬಾಯಿ ಮುಚ್ಚು ಎಂದು ಹೇಳಿಲ್ಲ. ಒಂದು ವೇಳೆ ಹೇಳಿದ್ದರೂ ಅವರು ದೊಡ್ಡವರು. ಅವರದೇ ದೊಡ್ಡದಾಗಲಿ ಬಿಡಿ’ ಎಂದು ಎಂದು ಕಾಂಗ್ರೆಸ್ ಶಾಸಕ ಜಮೀರ್‌ ಅಹ್ಮದ್‌ ಹೇಳಿದರು.

‘ಎಲ್ಲಕ್ಕಿಂತ ಮೊದಲು ಪಕ್ಷ. ಪಕ್ಷ ಕಟ್ಟಲು ಗಮನ ಕೊಡಿ ಎಂಬ ಕಾರಣಕ್ಕೆ ಶಿವಕುಮಾರ್ ಅವರು ಆ ರೀತಿ ಹೇಳಿರಬಹುದು. ನನ್ನ ಹೆಸರನ್ನು ಅವರು ಬಳಸಿಲ್ಲ’ ಎಂದು ಅವರು ನಗರದಲ್ಲಿ ಶನಿವಾರ ಮಾಧ್ಯಮಗಳ ಮುಂದೆ ಹೇಳಿದರು.

‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿ ಎಂಬುದು ರಾಜ್ಯದ ಅಲ್ಪಸಂಖ್ಯಾತರ ಅಭಿ‍ಪ್ರಾಯ ಆಗಿದೆ. ಅದನ್ನೇ ನಾನು ಹೇಳಿದ್ದೇನೆ. ಕೊನೆಗೆ ನಮ್ಮ ಪಕ್ಷದ ಹೈಕಮಾಂಡ್‌ ಇದನ್ನು ನಿರ್ಧಾರ ಮಾಡುತ್ತದೆ. ನಾವು ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಸಿದ್ದರಾಮೋತ್ಸವ’ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ರಾಜ್ಯದ ಎಲ್ಲೆಡೆ ಪ್ರವಾಸ ಕೈಗೊಂಡಿದ್ದೇನೆ. ಈ ವೇಳೆ ಸಿದ್ದರಾಮಯ್ಯ ಅವರ ಬಗ್ಗೆಯೇ ಅಲ್ಪಸಂಖ್ಯಾತರು ಒಲವು ಹೊಂದಿದ್ದು ಕಂಡುಬಂದಿದೆ. ಅದನ್ನೇ ನಾನೂ ಹೇಳಿದ್ದೇನೆ’ ಎಂದರು.

‘ತಮ್ಮ ಸಮುದಾಯದ ವ್ಯಕ್ತಿಯೇ ಮುಖ್ಯಮಂತ್ರಿ ಆಗಬೇಕು ಎಂದು ಎಲ್ಲರಿಗೂ ಆಸಕ್ತಿ ಇರುತ್ತದೆ. ಅದೇ ರೀತಿ ಮುಸ್ಲಿಮರಿಗೂ ಇದೆ. ಆದರೆ, ಒಕ್ಕಲಿಗ ಸಮುದಾಯದವರೇ ಮುಖ್ಯಮಂತ್ರಿ ಆಗಬೇಕು ಎಂಬ ಬಯಕೆ ಮೊದಲು ಹೊರಹಾಕಿದ್ದೇ ಡಿ.ಕೆ. ಶಿವಕುಮಾರ್ ಅವರು’ ಎಂದೂ ಜಮೀರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.