ADVERTISEMENT

Cabinet Expansion |ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಎಲ್ಲಾ ಗಾಳಿಸುದ್ದಿ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 16:00 IST
Last Updated 11 ಅಕ್ಟೋಬರ್ 2025, 16:00 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಎಂಥದೂ ಇಲ್ಲ. ಮಾಧ್ಯಮಗಳು ಗಾಳಿ ಸುದ್ದಿ ಪ್ರಕಟಿಸುತ್ತಿವೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಮುಖ್ಯಮಂತ್ರಿ ಅಥವಾ ನಾನು ಪ್ರಸ್ತಾಪ ಮಾಡಬೇಕು. ನಾವಿಬ್ಬರೂ ಪ್ರಸ್ತಾಪ ಮಾಡಲಿಲ್ಲ ಎಂದಾದರೆ ಅದು ಗಾಳಿ ಸುದ್ದಿ. ಆತುರದಲ್ಲಿರುವವರು, ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ’ ಎಂದರು.

‘ಮುಖ್ಯಮಂತ್ರಿ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ, ಕೆಲವು ಮಾಧ್ಯಮಗಳು ಸುದ್ದಿ ತಿರುಚಿ ವಿವಾದ ಸೃಷ್ಟಿಸುತ್ತಿವೆ. ಇದೇ ರೀತಿ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಾಕಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ನಾನು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಆತುರದಲ್ಲಿ ಇಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ. ಸುದ್ದಿ ತಿರುಚುವುದಾದರೆ, ನಾನು, ನಿಮಗೆ (ಮಾಧ್ಯಮ) ಸಹಕಾರ ನೀಡುವುದಿಲ್ಲ. ಕಾರ್ಯಕ್ರಮಗಳಿಗೆ ಕರೆಯುವುದೂ ಇಲ್ಲ, ಮಾಧ್ಯಮಗೋಷ್ಠಿ ಕರೆಯುವುದೂ ಇಲ್ಲ’ ಎಂದರು.

‘ಮುಖ್ಯಮಂತ್ರಿ ಆಗುವ ಕಾಲ ಹತ್ತಿರ ಇದೆ ಎಂದು ಹೇಳುವ ಅಗತ್ಯ ನನಗೆ ಇಲ್ಲ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಯಾವಾಗ ಅವಕಾಶ ಕೊಡುತ್ತಾನೊ ಕೊಡಲಿ. ಮಾಧ್ಯಮಗಳು ರಾಜಕಾರಣ ಮಾಡುವುದು ಬೇಡ’ ಎಂದರು.

ಹೈಕಮಾಂಡ್ ಹೇಳಿದರೆ ಅಧಿಕೃತ: ಪ್ರಿಯಾಂಕ್‌

‘ಅಧಿಕಾರ ಹಂಚಿಕೆ ಸಂಪುಟ ಪುನರ್‌ ರಚನೆ ಬಗ್ಗೆ ಹಾದಿಬೀದಿ ಮಾತುಗಳಿಗೆ ಮಾನ್ಯತೆ ಇಲ್ಲ. ಈ ಕುರಿತು ಹೈಕಮಾಂಡ್‌ ನಾಯಕರು ಹೇಳಿದರೆ ಮಾತ್ರ ಅಧಿಕೃತ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕಾಂಗ್ರೆಸ್‌ ಪಕ್ಷದ ನಾಯಕಿ ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಹೇಳಿಕೆ ನೀಡಬೇಕು. ಅವರು ಯಾವಾಗ ಮಾತನಾಡಬೇಕೋ ಆಗ ಮಾತನಾಡುತ್ತಾರೆ. ಬಹಿರಂಗ ಹೇಳಿಕೆ ನೀಡುವವರಿಗೆ ನೋಟಿಸ್‌ ಕೊಡಲಾಗಿದೆ. ಇನ್ನೂ ಕೊಡುತ್ತಾರೆ’ ಎಂದು ಸುಳಿವು ನೀಡಿದರು.

‘ಮುಖ್ಯಮಂತ್ರಿ ಅವರು ಕರೆದಿರುವ ಸಚಿವರ ಔತಣ ಕೂಟಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಾಳೆ ಉಪಮುಖ್ಯಮಂತ್ರಿಯೂ ಆಹ್ವಾನ ನೀಡಬಹುದು. ಸೋಮವಾರದ ಔತಣದಲ್ಲಿ ನಾಟಿ ಕೋಳಿ ಸಿಗಬಹುದು. ನನಗಂತೂ ಸೋಮವಾರ ಮಂಗಳವಾರ ಎನ್ನುವುದೇನಿಲ್ಲ. ನಮ್ಮದು ನಂಬಿಕೆಯ ಪ್ರವೃತ್ತಿ. ಮುದ್ದೆ ಸೊಪ್ಪಿನ ಸಾರು ಬಡಿಸಿದರೂ ಊಟ ಮಾಡುತ್ತೇವೆ’ ಎಂದರು. 

‘ಬಹಿರಂಗವಾಗಿ ಮಾತನಾಡುವುದು ಸಲ್ಲ’

‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವು (ಸಚಿವರು ಶಾಸಕರು) ಯಾರೂ ಇದರ ಬಗ್ಗೆ ಮಾತನಾಡಬಾರದು’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು ‘ಗೊಂದಲ ನಾವು ಸೃಷ್ಟಿ ಮಾಡಬಾರದು. ನಮಗೆ ಏನಾದರೂ ಬೇಕಾದರೆ ಹೈಕಮಾಂಡ್ ಬಳಿ ಹೇಳಬೇಕೇ ಹೊರತು ಮಾಧ್ಯಮಗಳಿಗೆ ಅಲ್ಲ. ಏನೇ ಇದ್ದರೂ ಹೈಕಮಾಂಡ್‌ ಬಳಿ ಹೋಗಿ ಹೇಳಲಿ. ಯಾರನ್ನು ಮಂತ್ರಿ ಮಾಡಬೇಕೆಂದು ಹೈಕಮಾಂಡ್ ನಿರ್ಧರಿಸಲಿದೆ’ ಎಂದರು. ‘ಮುಖ್ಯಮಂತ್ರಿಯವರು ಪ್ರತಿ ವರ್ಷ ಊಟಕ್ಕೆ ಆಹ್ವಾನಿಸುತ್ತಾರೆ. ಬೇರೆ ವಿಷಯವೇನೂ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.