ADVERTISEMENT

ನೌಕರರ ಆರೋಗ್ಯಕ್ಕೆ ‘ಸಂಜೀವಿನಿ’: ನಗದು ರಹಿತ ಉಚಿತ ಚಿಕಿತ್ಸೆ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅ.1ರಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 16:54 IST
Last Updated 23 ಸೆಪ್ಟೆಂಬರ್ 2025, 16:54 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (ಕೆಎಎಸ್‌ಎಸ್‌) ಅ.1ರಿಂದ ಅಧಿಕೃತವಾಗಿ ಜಾರಿಯಾಗಲಿದೆ.

ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದ ಅನುಷ್ಠಾನ ವಿಳಂಬವಾಗಿತ್ತು. ಅಂತಿಮವಾಗಿ ಅನುಷ್ಠಾನದ ದಿನಾಂಕ ನಿಗದಿಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ADVERTISEMENT

ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ, ಅನುದಾನಿತ ಸಂಸ್ಥೆಗಳ 3 ಲಕ್ಷ ಸಿಬ್ಬಂದಿ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಪ್ರಯೋಜನ ಸಿಗಲಿದೆ. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆ–ತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಈ ಬಾರಿ ಮಹಿಳಾ ನೌಕರರ ತಂದೆ–ತಾಯಿಗೂ ವಿಸ್ತರಿಸಲಾಗಿದೆ.

ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್‌ಎಎಸ್‌ಟಿ) ಯೋಜನೆಯ ಅನುಷ್ಠಾನದ ಸಂಸ್ಥೆಯಾಗಿ ಹೊಣೆ ನಿರ್ವಹಿಸಲಿದ್ದು, ಎಲ್ಲ ವರ್ಗದ ನೌಕರರು ಪ್ರತಿ ತಿಂಗಳು ತಮ್ಮ ಪಾಲಿನ ಕಂತು ಪಾವತಿಸಬೇಕಿದೆ. ಯೋಜನೆ ವ್ಯಾಪ್ತಿಗೆ ಒಳಪಡಿಸಲು ಇಚ್ಛಿಸದವರು ಅ.18ರ ಒಳಗೆ ತಮ್ಮ ಮೇಲಧಿಕಾರಿಗಳ ಮೂಲಕ ಲಿಖಿತ ಆಕ್ಷೇಪ ಸಲ್ಲಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. 

ಪತಿ–ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಯಾರಾದರೂ ಒಬ್ಬರ ವೇತನದಿಂದ ಮಾತ್ರ ಒಂದು ಕಂತು ಪಾವತಿಸಬಹುದು. ಅದನ್ನು ಅವರೇ ನಿರ್ಧಾರ ತೆಗೆದುಕೊಂಡು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಎಚ್‌ಆರ್‌ಎಂಎಸ್‌ ವ್ಯಾಪ್ತಿಯಲ್ಲಿ ಇರದ ಇತರೆ ಸರ್ಕಾರಿ ಸಂಸ್ಥೆಗಳ ನೌಕರರ ಕಂತನ್ನು ಆಯಾ ಸಂಸ್ಥೆಗಳು ಕಡಿತ ಮಾಡಿ ನೇರವಾಗಿ ಟ್ರಸ್ಟ್‌ ಖಾತೆಗೆ ಜಮೆ ಮಾಡಬೇಕು. ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ನೌಕರರ ಕಂತನ್ನು ಅಕ್ಟೋಬರ್‌ ತಿಂಗಳ ವೇತನದಿಂದಲೇ ಕಡಿತ ಮಾಡಿ, ಖಜಾನೆ–2 ಮೂಲಕ ಟ್ರಸ್ಟ್‌ ಖಾತೆಗೆ ಜಮೆ ಮಾಡಬೇಕು ಎಂದು ಸೂಚಿಸಲಾಗಿದೆ.

ಮಹತ್ವದ ಯೋಜನೆ ಅನುಷ್ಠಾನದ ಮೂಲಕ ಎಲ್ಲ ಸರ್ಕಾರಿ ನೌಕರರು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರ ಆರೋಗ್ಯ ಸುರಕ್ಷತೆಯ ಖಾತ್ರಿ ನೀಡಿದೆ
ದಿನೇಶ್‌ ಗುಂಡೂರಾವ್ ಆರೋಗ್ಯ ಸಚಿವ 
ಮಹಿಳಾ ನೌಕರರ ತಂದೆ–ತಾಯಿಯನ್ನೂ ಯೋಜನೆ ವ್ಯಾಪ್ತಿಗೆ ಒಳಪಡಿಸಿರುವುದು ಮಹತ್ವದ ನಿರ್ಧಾರ.  ಪೋಷಕರ ಆದಾಯದ ಮಿತಿಯನ್ನು ತಿಂಗಳಿಗೆ ₹27 ಸಾವಿರಕ್ಕೆ ನಿಗದಿ ಮಾಡಲಾಗಿದೆ
ಸಿ.ಎಸ್‌.ಷಡಾಕ್ಷರಿ ಅಧ್ಯಕ್ಷ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 

ಮರುಪಾವತಿ ಸೌಲಭ್ಯ 6 ತಿಂಗಳು ವಿಸ್ತರಣೆ

ಸರ್ಕಾರಿ ನೌಕರರು ಯಾವುದೇ ಸಾರ್ವಜನಿಕ ಆಸ್ಪತ್ರೆಗಳು ಬೋಧನಾ ಆಸ್ಪತ್ರೆಗಳು ಸ್ಥಳೀಯ ಸಂಸ್ಥೆಗಳ ಆಸ್ಪತ್ರೆಗಳು ಹಾಗೂ ಯೋಜನೆಗೆ ನೋಂದಾಯಿಸಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಇನ್ನಷ್ಟು ಖಾಸಗಿ ಆಸ್ಪತ್ರೆಗಳನ್ನು ಯೋಜನೆ ಅಡಿ ನೋಂದಣಿ ಮಾಡಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದ್ದು ಅಲ್ಲಿಯವರೆಗೆ ನೌಕರರ ಚಿಕಿತ್ಸಾ ಕಾರ್ಯಗಳಿಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನು 6 ತಿಂಗಳವರೆಗೆ ವಿಸ್ತರಿಸಲಾಗಿದೆ. ಮುಂಗಡ ಪಾವತಿಸಿ ಚಿಕಿತ್ಸೆ ಪಡೆದ ನೌಕರರು ಈ ಸೌಲಭ್ಯ ಪಡೆಯಬಹುದು. 

1200 ಕಾಯಿಲೆಗಳಿಗೆ ಚಿಕಿತ್ಸೆ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅಡಿ 1200 ಪ್ರಕಾರದ ಕಾಯಿಲೆಗಳಿಗೆ ನಗದು ರಹಿತ ಉಚಿತ ಚಿಕಿತ್ಸೆ ಸಿಗಲಿದೆ. ಈಗಾಗಲೇ 500 ಖಾಸಗಿ ಆಸ್ಪತ್ರೆಗಳ ಜತೆಗೆ ಆರೋಗ್ಯ ಸುರಕ್ಷಾ ಟ್ರಸ್ಟ್‌ ಒಪ್ಪಂದ ಮಾಡಿಕೊಂಡಿದ್ದು ಆರು ತಿಂಗಳ ಒಳಗೆ ಒಂದು ಸಾವಿರ ಆಸ್ಪತ್ರೆಗಳನ್ನು ಯೋಜನೆ ವ್ಯಾಪ್ತಿಗೆ ತರಲು ಪ್ರಕ್ರಿಯೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.