ADVERTISEMENT

ನಾವು ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಜಾತಿ ಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 10:54 IST
Last Updated 3 ಅಕ್ಟೋಬರ್ 2021, 10:54 IST
ಗಾಣಿಗ ಸಮುದಾಯದ ಕಾರ್ಯಾಗಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ ಭಾಗವಹಿಸಿದ್ದರು.
ಗಾಣಿಗ ಸಮುದಾಯದ ಕಾರ್ಯಾಗಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ ಭಾಗವಹಿಸಿದ್ದರು.    

ಬೆಂಗಳೂರು: ‘ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಯನ್ನು ಈಗಿನ ಸರ್ಕಾರ ಸ್ವೀಕರಿಸುವಂತೆ ಕಾಣುತ್ತಿಲ್ಲ. ಹೀಗಾಗಿ, ನಾವು (ಕಾಂಗ್ರೆಸ್‌) ಮತ್ತೆ ಅಧಿಕಾರಕ್ಕೆ ಬಂದ ಮೇಲೆ ವರದಿ ಸ್ವೀಕರಿಸುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ದೇವನಹಳ್ಳಿಯಲ್ಲಿ ಭಾನುವಾರ ನಡೆದ ಗಾಣಿಗ ಸಮುದಾಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ನನ್ನ ಅವಧಿಯಲ್ಲಿ ವರದಿ ಸಿದ್ಧಗೊಂಡಿರಲಿಲ್ಲ. ಈಗ ವರದಿ ಸಿದ್ಧವಾಗಿದೆ. ಆದರೆ, ಈಗಿನ ಯಾವ ಸರ್ಕಾರಗಳಿಗೂ ಅದನ್ನು ಸ್ವೀಕರಿಸುವ ಬದ್ಧತೆಯಿಲ್ಲ’ ಎಂದರು.

‘ಮೀಸಲಾತಿ ವಿಚಾರ ನ್ಯಾಯಾಲಯದ ಮುಂದೆ ಬಂದಾಗಲೆಲ್ಲ ಜಾತಿ ಜನಸಂಖ್ಯೆಗೆ ಸಂಬಂಧಿಸಿದಂತೆ ನಿಮ್ಮ ಬಳಿಯಿರುವ ಅಧಿಕೃತ ದಾಖಲೆ ಏನು ಎಂದು ನ್ಯಾಯಾಲಯ ಪ್ರಶ್ನಿಸುತ್ತಿತ್ತು. ಈ ಕಾರಣಕ್ಕೆ ನಾನು ಮುಖ್ಯಮಂತ್ರಿ ಆಗಿದ್ದಾಗ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶಿಸಿದ್ದೆ. ಯಾವ ಜಾತಿಗೂ ಅನ್ಯಾಯ ಮಾಡುವುದು ಈ ಸಮೀಕ್ಷೆಯ ಉದ್ದೇಶವಲ್ಲ. ಜಾತಿ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವುದು ಮುಖ್ಯ ಉದ್ದೇಶ’ ಎಂದರು.

ADVERTISEMENT

‘ಕೆಲವರು ಜಾತಿ ಸಮ್ಮೇಳನಗಳನ್ನು ಮಾಡುವುದು ತಪ್ಪು ಎನ್ನುತ್ತಾರೆ. ಮುಂದೆ ತಮ್ಮ ವಿರುದ್ಧವೇ ಧ್ವನಿ ಎತ್ತಬಹುದು ಎಂಬ ಹತಾಶೆ ಇದಕ್ಕೆ ಕಾರಣ’ ಎಂದ ಸಿದ್ದರಾಮಯ್ಯ, ‘ಅವಕಾಶದಿಂದ ವಂಚಿತರಾದ ಜಾತಿಗಳು ಜಾತಿ ಸಮ್ಮೇಳನಗಳನ್ನು ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಅದು ಜಾತೀಯತೆಯಾಗಲ್ಲ. ಸಮಾಜದ ಸಂಪತ್ತನ್ನು ಅನುಭವಿಸುವ ಸಮುದಾಯಗಳು ಜಾತಿ ಸಮ್ಮೇಳನಗಳನ್ನು ನಡೆಸಿದರೆ ಮಾತ್ರ ಅದು ಜಾತೀಯತೆ ಆಗುತ್ತದೆ ಎಂದು ಲೋಹಿಯಾ ಹೇಳಿದ್ದರು’ ಎಂದರು.

‘ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳುವುದು ಅತಿ ಅಗತ್ಯ. ಶತಮಾನಗಳ ಹಿಂದೆ ವ್ಯಕ್ತಿಯ ಕಾಯಕದ ಆಧಾರದ ಮೇಲೆ ಜಾತಿ ನಿರ್ಮಾಣ ಮಾಡಲಾಗಿದೆ. ಈ ಚತುರ್ವರ್ಣ ವ್ಯವಸ್ಥೆ ನಮ್ಮ ನಡುವೆ ಇನ್ನೂ ಜೀವಂತವಾಗಿದೆ. ಇಂದು ಶೋಷಿತ ಸಮುದಾಯಗಳು ಶಿಕ್ಷಣ ಪಡೆದಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಮಾತನಾಡುವ ಧೈರ್ಯ ಬಂದಿದೆ. ಇಂತಹ ವ್ಯವಸ್ಥೆ ಹಿಂದೆ ಇರಲಿಲ್ಲ’ ಎಂದರು.

‘ಸಂವಿಧಾನವು ಸಮಾನತೆಗೆ ಅವಕಾಶ ನೀಡಿರುವುದರಿಂದ ಇಂದು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಇಂಥವರ ಬಗ್ಗೆ ತಳ ಸಮುದಾಯಗಳು ಜಾಗ್ರತೆ ವಹಿಸಬೇಕು. ಹಿಂದೆ ಮೀಸಲಾತಿ ವಿರೋಧಿಸುತ್ತಿದ್ದವರು ಈಗ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಇದಕ್ಕೆ ಕಾರಣ ಸಮಾಜದ ಎಲ್ಲ ಜಾತಿಗಳು ಮೀಸಲಾತಿ ಅಡಿಯಲ್ಲಿ ಬಂದಿರುವುದು. ಮೀಸಲಾತಿ ಈಗ ಶೇ 60 ಆಗಿದೆ. ಮೇಲ್ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇ 10 ಮೀಸಲಾತಿ ಕಲ್ಪಿಸಲಾಗಿದೆ‘ ಎಂದರು.

‘ನಾನು ಕಷ್ಟಪಟ್ಟು ಮೀಸಲಾತಿ ರಥವನ್ನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ. ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ, ಇಲ್ಲವಾದರೆ ಅಲ್ಲಿಯೇ ಬಿಟ್ಟುಬಿಡಿ, ದಯವಿಟ್ಟು ರಥವನ್ನು ಹಿಂದಕ್ಕೆ ಮಾತ್ರ ಎಳೆಯಬೇಡಿ’ ಎಂದೂ ಸಿದ್ದರಾಮಯ್ಯ ಮನವಿ ಮಾಡಿದರು.

’ಗಾಣಿಗರು ಬಹಳ ಹಿಂದುಳಿದ ಸಮಾಜದವರು. ಈಗ ಆಧುನಿಕ ಯಂತ್ರಗಳು ಬಂದ ಮೇಲೆ ಈ ಸಮಾಜದ ಉದ್ಯೋಗವನ್ನು ಕಸಿದುಕೊಂಡಿದೆ. ಈ ಸಮಾಜದವರು ಬರೀ ಎಣ್ಣೆ ತೆಗಿಯುವ ಉದ್ಯೋಗಕ್ಕೆ ಜೋತುಬೀಳದೆ ಶಿಕ್ಷಣದ ಕಡೆಗೆ ಹೆಚ್ಚು ಮಹತ್ವ ನೀಡಿ, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಪಡೆಯುವ ಪ್ರಯತ್ನ ಮಾಡಬೇಕು. ಜಾತಿಯಿಂದ ಯಾರೂ ಬುದ್ದಿವಂತರೂ ಅಲ್ಲ, ದೊಡ್ಡವರೂ ಅಲ್ಲ. ರಾಮಾಯಣ, ಮಹಾಭಾರತ ಬರೆದವರು ಕೂಡ ಸಮಾಜದಿಂದ ಶೋಷಣೆಗೊಳಪಟ್ಟ ಜಾತಿಗೆ ಸೇರಿದವರೆ. ಹೀಗಾಗಿ ಜಾತಿಯಿಂದ ಜ್ಞಾನ, ಸಾಮರ್ಥ್ಯ ನಿರ್ಧಾರಿತವಾಗಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಂಡು ಸಾಧನೆಯ ಕಡೆಗೆ ಗಮನ ನೀಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.