ADVERTISEMENT

ಕಾವೇರಿ ಆರತಿಗೆ ವಿಧ್ಯುಕ್ತ ಚಾಲನೆ; ರೈತರ ವಿರೋಧದ ನಡುವೆ ಅದ್ದೂರಿ ಸಮಾರಂಭ

ರೈತರ ವಿರೋಧದ ನಡುವೆ ಅದ್ದೂರಿ ಸಮಾರಂಭ

ಸಿದ್ದು ಆರ್.ಜಿ.ಹಳ್ಳಿ
Published 27 ಸೆಪ್ಟೆಂಬರ್ 2025, 0:30 IST
Last Updated 27 ಸೆಪ್ಟೆಂಬರ್ 2025, 0:30 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆ ಮುಂಭಾಗದ ದೋಣಿ ವಿಹಾರ ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದ ಕಾವೇರಿ ಪ್ರತಿಮೆ ಮುಂಭಾಗ ವೈದಿಕರ ತಂಡವು ಶುಕ್ರವಾರ ಸಂಜೆ ‘ಕಾವೇರಿ ಆರತಿ’ ಬೆಳಗಿತು 
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆ ಮುಂಭಾಗದ ದೋಣಿ ವಿಹಾರ ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದ ಕಾವೇರಿ ಪ್ರತಿಮೆ ಮುಂಭಾಗ ವೈದಿಕರ ತಂಡವು ಶುಕ್ರವಾರ ಸಂಜೆ ‘ಕಾವೇರಿ ಆರತಿ’ ಬೆಳಗಿತು    

ಕೆಆರ್‌ಎಸ್‌ ಬೃಂದಾವನ (ಮಂಡ್ಯ ಜಿಲ್ಲೆ): ರೈತ ಸಂಘಟನೆಗಳ ತೀವ್ರ ಪ್ರತಿಭಟನೆ ನಡುವೆಯೂ ‘ಗಂಗಾರತಿ’ ಮಾದರಿಯ ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೆ ಕೆಆರ್‌ಎಸ್‌ ಬೃಂದಾವನ ಉದ್ಯಾನದ ಅಂಗಳದಲ್ಲಿ ಶುಕ್ರವಾರ ಸಂಜೆ ಅದ್ದೂರಿ ಚಾಲನೆ ಸಿಕ್ಕಿತು. 

ವಿಶೇಷ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದ್ದ ಬೃಂದಾವನ ಅಂಗಳದಲ್ಲಿ ನೆರೆದಿದ್ದ ಸಾವಿರಾರು ಪ್ರವಾಸಿಗರು ಮತ್ತು ಜಿಲ್ಲೆಯ ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 

ಕೆಆರ್‌ಎಸ್‌ ಅಣೆಕಟ್ಟೆ ಸಮೀಪದ ದೋಣಿ ವಿಹಾರ ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದ ಕಾವೇರಿ ಮೂರ್ತಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆರತಿ ಬೆಳಗಿ ಕಾರ್ಯಕ್ರಮಕ್ಕೆ ಸಂಜೆ 7.15ಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ನಂತರ ‘ಶಿಲಾಫಲಕ’ ಅನಾವರಣಗೊಳಿಸಿದರು. ವೈದಿಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 50ಕ್ಕೂ ಹೆಚ್ಚಿನ ವೈದಿಕರ ತಂಡ ಮಂತ್ರಘೋಷ ಮೊಳಗಿಸಿತು. 

ADVERTISEMENT

ನಂತರ ಮಾತನಾಡಿದ ಶಿವಕುಮಾರ್, ‘ಇದು ಐತಿಹಾಸಿಕ ಕಾರ್ಯಕ್ರಮ. ಸ್ಟೇಡಿಯಂ ಮಾದರಿಯ ಆಸನಗಳನ್ನು ನಿರ್ಮಿಸಿ, 10 ಸಾವಿರ ಮಂದಿ ಆರತಿ ವೀಕ್ಷಿಸುವಂಥ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಿದ್ದೆವು. ಕೆಲವು ತೊಡಕುಗಳಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಸಾಂಕೇತಿಕ ಕಾರ್ಯಕ್ರಮ ಹಮ್ಮಿಕೊಂಡೆವು’ ಎಂದರು. 

‘ಪವಿತ್ರ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ದೀಪ ಬೆಳಗಿಸಿದ್ದಾರೆ. ಬದುಕು ಕ್ಷಣಿಕವಾಗಿದ್ದು, ಜೀವಿತಾವಧಿಯಲ್ಲಿ ಸಾರ್ಥಕ ಕೆಲಸ ಮಾಡಬೇಕು. ಅದಕ್ಕಾಗಿಯೇ ನಾಲ್ವಡಿ, ವಿಶ್ವೇಶ್ವರಯ್ಯ ಅವರನ್ನು ಜನ ನೆನೆಯುತ್ತಾರೆ. ಅದೇ ರೀತಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿಸಲು ಅಡಿಗಲ್ಲು ಹಾಕಿದ್ದೇವೆ. ಭವಿಷ್ಯದಲ್ಲಿ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆಯಲಿದೆ’ ಎಂದರು. 

‘ತಾಯಿ ಚಾಮುಂಡೇಶ್ವರಿ ಮತ್ತು ಕಾವೇರಿ ಮಾತೆಯ ಆಶೀರ್ವಾದದಿಂದ ಮೇಕೆದಾಟು ಯೋಜನೆ ಅನುಷ್ಠಾನ ಸಾಧ್ಯವಾಗಲಿದೆ. ಪ್ರಾರ್ಥನೆ ಯಾರ ಮನೆಯ ಸ್ವತ್ತೂ ಅಲ್ಲ. ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆ ಎಂದಿಗೂ ವಿಫಲವಾಗಲಾರದು’ ಎಂದು ಹೇಳಿ, ಕಾವೇರಿ ಆರತಿ ವಿರೋಧಿಸುವವರ ನಿಲುವನ್ನು ಟೀಕಿಸಿದರು.

ರೈತರ ಬಂಧನ 

ಕೆ.ಆರ್.ಎಸ್ (ಮಂಡ್ಯ ಜಿಲ್ಲೆ): ಕಪ್ಪುಪಟ್ಟಿ ಧರಿಸಿ ‘ಕಾವೇರಿ ಆರತಿ’ ವಿರೋಧಿಸಿ ಅಣೆಕಟ್ಟೆಯ ಸೌತ್ ಗೇಟ್ ಬಳಿ ಪ್ರತಿಭಟಿಸುತ್ತಿದ್ದ ವಿವಿಧ ಸಂಘಟನೆಗಳ ನೂರಾರು ಮುಖಂಡರನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಕಾರ್ಯಕ್ರಮಕ್ಕೆ ಬರುವ ಮುನ್ನವೇ ಪೊಲೀಸರು ಬಂಧಿಸಿದರು. ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ಮುಖಂಡರು ‘ಕಾವೇರಿ ಆರತಿ’ ಕುರಿತು ಜನಜಾಗೃತಿ ಮೂಡಿಸುತ್ತಿದ್ದೇವೆ. ತಡೆಯಬೇಡಿ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕಾನೂನು ಉಲ್ಲಂಘಿಸಿ ಸರ್ಕಾರ ಕಾವೇರಿ ಆರತಿ ಮಾಡುತ್ತಿದೆ’ ಎಂದು ದೂರಿ ಧಿಕ್ಕಾರ ಕೂಗಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ರೈತ ಸಂಘ ವಿವಿಧ ಕನ್ನಡ ಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.