
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 15ನೇ ಹಣಕಾಸು ಆಯೋಗದ ಅನುದಾನ ದುರ್ಬಳಕೆ ಆಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.
‘15ನೇ ಹಣಕಾಸು ಆಯೋಗದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದರೆ ಮುಂದೆ ಒಂದು ರೂಪಾಯಿ ಅನುದಾನವೂ ಸಿಗುವುದಿಲ್ಲ. ಇವರು ಮಾಡಿದ ತಪ್ಪಿಗೆ ರಾಜ್ಯ ಅನುದಾನ ಕಳೆದುಕೊಳ್ಳುತ್ತದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಣಕಾಸು ಆಯೋಗವು ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡುವ ಅನುದಾನದಡಿ ಅನಿರ್ಬಂಧಿತ ಮತ್ತು ನಿರ್ಬಂಧಿತ ಎಂಬ ಎರಡು ವಿಧಗಳಿವೆ. ಅನಿರ್ಬಂಧಿತ ಅನುದಾನವು ಕೇಂದ್ರದಿಂದ ಕರ್ನಾಟಕದ ಆರು ಸಾವಿರ ಗ್ರಾಮ ಪಂಚಾಯಿತಿಗಳಿಗೆ ನಿಗದಿಯಾಗಿ ಬರುತ್ತದೆ. ಆಯುಕ್ತರ ಕಾರ್ಯಾಲಯದಲ್ಲಿ ಸಣ್ಣಪುಟ್ಟ ಬದಲಾವಣೆಗೆ ಸ್ವಲ್ಪ ದಿನ ಅವಕಾಶ ಕೊಡುತ್ತಾರೆ. ಆದರೆ ಒಂದು ಪೈಸೆ ಅನುದಾನವನ್ನೂ ಬದಲಿಸುವಂತಿಲ್ಲ. ಆದರೆ ಇಲ್ಲಿ ಬೇಕಾಬಿಟ್ಟಿ ಬದಲಿಸಲಾಗಿದೆ ಎಂದರು.
ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಹೈಮಾಸ್ಟ್ ದೀಪ ಹಾಕಿಸಿಕೊಳ್ಳಲು ಕಮಿಷನ್ ಆಧಾರದಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕೊಂದರಲ್ಲೇ ಬೇರೆ ಗ್ರಾಮ ಪಂಚಾಯಿತಿಗೆ ಹೋಗಬೇಕಾದ ಕೇಂದ್ರದ ಅನುದಾನವನ್ನು 24 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಹಂಚಿಕೆ ಮಾಡಿದ್ದಾರೆ. ಈ ಗ್ರಾಮ ಪಂಚಾಯಿತಿಗಳು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಸೇರಿದವು ಎಂಬ ಕಾರಣಕ್ಕೆ ಈ ರೀತಿ ವಿತರಿಸಲಾಗಿದೆ ಎಂದು ಅವರು ದೂರಿದರು.
ರಾಯಭಾಗ ತಾಲ್ಲೂಕಿನ ಒಂದೇ ಗ್ರಾಮ ಪಂಚಾಯಿತಿಯಲ್ಲಿ 52 ಕಾಮಗಾರಿಗಳ ಹೆಸರಿನಲ್ಲಿ ₹10 ಕೋಟಿಯಿಂದ ₹12 ಕೋಟಿಯಷ್ಟು ಹಗರಣ ನಡೆದಿದೆ. ವಾಸ್ತವದಲ್ಲಿ ಕಾಮಗಾರಿ ನಡೆಸದೇ ಹಣ ಪಡೆಯಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.