
ನವದೆಹಲಿ: ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕದಲ್ಲಿ 9.67 ಲಕ್ಷ ಟನ್ ತೊಗರಿ ಖರೀದಿಗೆ ಅಸ್ತು ಎಂದಿದೆ.
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ನಫೆಡ್ ಮತ್ತು ಎನ್‌ಸಿಸಿಎಫ್ ಮೂಲಕ ಆದ್ಯತೆ ಮೇಲೆ ತೊಗರಿ ಖರೀದಿಗೆ ತ್ವರಿತ ಅನುಮೋದನೆ ನೀಡುವ ಮೂಲಕ ಸ್ಪಂದಿಸಿದೆ.
ಕರ್ನಾಟಕದಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕೂಡಲೇ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಮುಂದಾಗುವಂತೆ ಕೋರಿ ಸಚಿವ ಪ್ರಲ್ಹಾದ ಜೋಶಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದಿದ್ದರು.
2025-26ರ ಖಾರಿಫ್ ಋತುವಿನಲ್ಲಿ ತೊಗರಿ ಖರೀದಿಗಾಗಿ ಬೆಲೆ ಬೆಂಬಲ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿ.10ರಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದಾರೆ. ಖರೀದಿ ಪ್ರಾರಂಭದ ದಿನಾಂಕದಿಂದ 90 ದಿನಗಳವರೆಗೆ ರಾಜ್ಯದಲ್ಲಿ PSS ಅಡಿಯಲ್ಲಿ ಒಟ್ಟು 9.67 ಲಕ್ಷ ಟನ್ ಖರೀದಿ ಮಾಡಲಾಗುತ್ತದೆ.
2025-26ಕ್ಕೆ ಅಂದಾಜು 12.60 ಲಕ್ಷ ಟನ್ ಉತ್ಪಾದನೆಯೊಂದಿಗೆ ಕರ್ನಾಟಕ ಪ್ರಮುಖ ತೊಗರಿ ಬೆಳೆ ಉತ್ಪಾದಕ ರಾಜ್ಯವಾಗಿದೆ. ಮಾರುಕಟ್ಟೆಯಲ್ಲಿ ಮಾದರಿ ಬೆಲೆ ಕ್ವಿಂಟಲ್‌ಗೆ ₹ 5,830 ರಿಂದ 6, 700ರ ನಡುವಿದೆ. 2025-26ಕ್ಕೆ ತೊಗರಿ ಬೆಳೆಗೆ ಘೋಷಿಸಲಾದ ಎಂಎಸ್ ಪಿ ಕ್ವಿಂಟಲ್‌ಗೆ ₹. 8,000 ಆಗಿದೆ. ಆದರೆ ಮಾರುಕಟ್ಟೆ ಬೆಲೆ ಎಂಎಸ್ ಪಿಗಿಂತ ಕಡಿಮೆಯಿದೆ. ಹಾಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.