ADVERTISEMENT

ಕೇರಳದ ಕೇಂದ್ರೀಯ ವಿವಿಯಲ್ಲಿ ಕನ್ನಡಕ್ಕೆ ಕುತ್ತು: ಸಿಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 17:10 IST
Last Updated 17 ಜನವರಿ 2022, 17:10 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ಕೇರಳದ ಕಾಸರಗೋಡಿನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದ್ದು, ತಕ್ಷಣ ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರಿಗೆ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಪತ್ರ ಬರೆದಿದ್ದಾರೆ.

ಈ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2018ರಲ್ಲಿ ಕನ್ನಡ ವಿಭಾಗವನ್ನು ಆರಂಭಿಸಲಾಗಿದೆ.ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಕೇಂದ್ರೀಯ ವಿಶ್ವವಿದ್ಯಾಲಯಗಳ ಕೇಂದ್ರೀಕೃತ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಕನ್ನಡ ವಿಭಾಗಕ್ಕೆ ಕಾಸರಗೋಡಿನ ವಿಶ್ವವಿದ್ಯಾಲಯದಲ್ಲಿಯೇ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗುತ್ತಿದೆ.

ಅದರಂತೆ ಮೊದಲ ವರ್ಷ 11, ಎರಡನೇ ವರ್ಷ 18 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ, ಈ ವರ್ಷ ಪ್ರವೇಶ ಪಡೆಯಲು ಆಸಕ್ತರಾದ ವಿದ್ಯಾರ್ಥಿಗಳ ಒಪ್ಪಿಗೆ ಪತ್ರ ತರಲು ಮೌಖಿಕವಾಗಿ ಕುಲಪತಿ ಸೂಚಿಸಿದ್ದಾರೆ. ಆ ಪ್ರಕಾರ, ಕನ್ನಡ ಅಧ್ಯಾಪಕರು 21 ವಿದ್ಯಾರ್ಥಿಗಳ ಒಪ್ಪಿಗೆ ಪತ್ರ ತಂದಿದ್ದಾರೆ. ಆದರೆ, ಪ್ರವೇಶ ನೀಡಲು ಕುಲಪತಿ ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಕನ್ನಡ ವಿಭಾಗ ಮುಚ್ಚವ ಪರಿಸ್ಥಿತಿ ಬಂದಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ADVERTISEMENT

ಈ ವಿದ್ಯಮಾನಗಳನ್ನು ಗಮನಿಸಿದಾಗ, ಈ ವಿಶ್ವವಿದ್ಯಾಲಯದ ಕನ್ನಡವಿಭಾಗವನ್ನೇಮುಚ್ಚುವ ಹುನ್ನಾರ ಕಂಡುಬರುತ್ತಿದೆ. ಕನ್ನಡ ವಿಭಾಗಕ್ಕೆ ಏಳು ಜನ ಕಾಯಂ ಅಧ್ಯಾಪಕರನ್ನು ನೇಮಿಸಿಕೊಳ್ಳಲು ಪ್ರಕಟಣೆ ಹೊರಡಿಸಿದ್ದರೂ, ಕನ್ನಡ ವಿಭಾಗಕ್ಕೆ ವಿದ್ಯಾರ್ಥಿಗಳಿಲ್ಲ ಎಂಬ ಕಾರಣ ನೀಡಿ ಈ ಹುದ್ದೆಗಳನ್ನು ಬೇರೆ ವಿಭಾಗಕ್ಕೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ ಎಂಬ ದೂರಿದೆ. ವಿದ್ಯಾರ್ಥಿಗಳಿಂದ ಒಪ್ಪಿಗೆ ಪತ್ರ ತಂದ ಬಳಿಕವೂ ಪ್ರವೇಶ ನಿರಾಕರಿಸುತ್ತಿರುವುದು ಕನ್ನಡ ವಿಭಾಗಕ್ಕೆ ಕುತ್ತು ತರುವ ಕ್ರಮವಾಗಿದೆ. ಇದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನ ನೀಡಿರುವ ಶೈಕ್ಷಣಿಕ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ, ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಅಲ್ಲಿನ ಕುಲಪತಿ ಮತ್ತು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ, ಕನ್ನಡ ವಿಭಾಗಕ್ಕೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಬರಗೂರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.