ADVERTISEMENT

ಚಂದಾಪುರ ಕೆರೆ ಮಾಲಿನ್ಯ: 54 ಕೈಗಾರಿಕೆಗಳಿಗೆ ₹140 ಕೋಟಿ ದಂಡ

ಎನ್‌ಜಿಟಿಗೆ ರಾಜ್ಯ ಸರ್ಕಾರ ‘ಪ್ರಮಾಣ’

ಮಂಜುನಾಥ್ ಹೆಬ್ಬಾರ್‌
Published 2 ಜನವರಿ 2025, 23:30 IST
Last Updated 2 ಜನವರಿ 2025, 23:30 IST
   

ನವದೆಹಲಿ: ಬೆಂಗಳೂರಿನ ಚಂದಾಪುರ ಕೆರೆಗೆ ಕೊಳಚೆ ನೀರನ್ನು ಬಿಟ್ಟ ಕಾರಣಕ್ಕೆ 54 ಕೈಗಾರಿಕೆಗಳಿಗೆ ಕರ್ನಾಟಕ ಸರ್ಕಾರವು ಪರಿಸರ ಪರಿಹಾರದ ರೂಪದಲ್ಲಿ ₹140 ಕೋಟಿ ದಂಡ  ವಿಧಿಸಿದೆ. 

ಚಂದಾಪುರ ಕೆರೆ ಮಲಿನಗೊಂಡು ಅವಸಾನದ ಅಂಚಿಗೆ ತಲುಪಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠವು ಕರ್ನಾಟಕ ಸರ್ಕಾರಕ್ಕೆ ₹500 ಕೋಟಿ ದಂಡ ವಿಧಿಸಿತ್ತು. ಕೆರೆಗೆ ಸುತ್ತಮುತ್ತಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಕೊಳಚೆ ನೀರು ಸೇರಿ ಅಪಾರ ಹಾನಿ ಉಂಟಾಗಿದ್ದು, ಇದಕ್ಕೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಪೀಠ ಕಿಡಿಕಾರಿತ್ತು. ದಂಡ ಮೊತ್ತವನ್ನು ಜಲಕಾಯದ ಪುನರುಜ್ಜೀವನಕ್ಕೆ ಬಳಸುವಂತೆ ತಾಕೀತು ಮಾಡಿತ್ತು. 

’ಈ ಜಲಕಾಯವು 24.27 ಎಕರೆ ಪ್ರದೇಶದಲ್ಲಿದೆ. ಹೀಲಳಿಗೆ ಗ್ರಾಮದಲ್ಲಿ 7.2 ಎಕರೆ ಹಾಗೂ ಚಂದಾಪುರ ಪಟ್ಟಣದಲ್ಲಿ 17.25 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ನಿರ್ಮಾಣ ಚಟುವಟಿಕೆಗಳಿಗಾಗಿ ಜಲಕಾಯದ ಎರಡು ಎಕರೆಯನ್ನು ಒತ್ತುವರಿ ಮಾಡಲಾಗಿದೆ. ಕೆರೆಯ ಮೀಸಲು ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಅಂಗಡಿಗಳು ನಿರ್ಮಾಣವಾಗಿವೆ. ಕೆರೆಯ ಸುತ್ತ ಹಾಕಿರುವ ಬೇಲಿ ಕಿತ್ತು ಹೋಗಿದೆ. ಕೆರೆಯ ಪಕ್ಕದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇಲ್ಲ. ಹೀಗಾಗಿ, ಕೊಳಚೆ ನೀರು ನೇರವಾಗಿ ಜಲಕಾಯವನ್ನು ಸೇರುತ್ತಿದೆ. ಜಿಗಣಿ–ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕೈಗಾರಿಕಾ ತ್ಯಾಜ್ಯವು ಕೆರೆಯನ್ನು ಸೇರುತ್ತಿದೆ. ಇದು ಸರ್ಕಾರ ರೂಪಿಸಿರುವ ನಿಯಮಕ್ಕೆ ವಿರುದ್ಧ. ಕೈಗಾರಿಕೆಗಳು ತ್ಯಾಜ್ಯ ನೀರನ್ನು ಜಲಕಾಯಕ್ಕೆ ಬಿಡುವಂತಿಲ್ಲ’ ಎಂದು ಪೀಠ ಹೇಳಿತ್ತು. 

ADVERTISEMENT

‘ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಔಷಧ ಉತ್ಪಾದಿಸುವ ಕೈಗಾರಿಕೆಗಳು, ಪವರ್ ಕೋಟಿಂಗ್‌, ಎಲೆಕ್ಟ್ರೋಪ್ಲೇಟಿಂಗ್‌ ಸೇರಿದಂತೆ ಕೆಂ‍‍ಪು ವರ್ಗೀಕರಣದ 195 ಕೈಗಾರಿಕೆಗಳು ಇವೆ. ಬೆಂಗಳೂರು ನಗರದ ಜನರ ಜಲದಾಹವನ್ನು ನೀಗಿಸಲು ಕೆರೆಯಲ್ಲಿ ಕೊಳಚೆ ಬಾವಿಗಳನ್ನು ಕೊರೆದು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಜಲಕಾಯದ ನೀರಿನ ಗುಣಮಟ್ಟ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ಸಲ್ಲಿಸಿದೆ. ಕೊಳಚೆ ನೀರು ಬಿಟ್ಟ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪೀಠ ನಿರ್ದೇಶನ ನೀಡಿತ್ತು. 

ದಂಡಕ್ಕೆ ವಿನಾಯಿತಿ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪೀಠ ತಿರಸ್ಕರಿಸಿತ್ತು. ಕೆರೆ ಪುನರುಜ್ಜೀವನಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು. ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಎನ್‌ಜಿಟಿಗೆ ಗುರುವಾರ ವರದಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಾಲ್ಕು ಕೈಗಾರಿಕೆಗಳಿಂದ ಈ ವರೆಗೆ ₹1.39 ಕೋಟಿ ದಂಡ ವಸೂಲಿ ಮಾಡಿದೆ. ಉಳಿದ ₹138 ಕೋಟಿ ಮೊತ್ತ ವಸೂಲಿ ಆಗಿಲ್ಲ. ದಂಡ ವಿಧಿಸಿದ್ದನ್ನು ಪ್ರಶ್ನಿಸಿ 17 ಕೈಗಾರಿಕೆಗಳು ಎನ್‌ಜಿಟಿಗೆ ಮೇಲ್ಮನವಿ ಸಲ್ಲಿಸಿವೆ ಹಾಗೂ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿವೆ. ದಂಡ ವಸೂಲಿಗಾಗಿ ಕೈಗಾರಿಕೆಗಳಿಗೆ ಷೋಕಾಸ್‌ ನೋಟಿಸ್‌ ನೀಡಲಾಗಿದೆ  ಎಂದು ರಾಜ್ಯ ಸರ್ಕಾರ ತಿಳಿಸಿದೆ. 

ತ್ಯಾಜ್ಯ ಸಂಸ್ಕರಣ ಘಟಕಕ್ಕೆ ₹41 ಕೋಟಿ

ಚಂದಾಪುರ ಕೆರೆಯಲ್ಲಿ 1.5 ದಶಲಕ್ಷ ಲೀಟರ್ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣ ಘಟಕ ಸ್ಥಾಪನೆಗೆ ಹಣಕಾಸು ನೆರವು ನೀಡಲು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಒಪ್ಪಿದೆ. 

ಚಂದಾಪುರ ಕೆರೆಯ ಜಲಾನಯನ ಪ್ರದೇಶದಲ್ಲಿ 207 ಕೈಗಾರಿಕೆಗಳಿವೆ. ಈ ಪೈಕಿ ಪ್ರಸ್ತುತ 162 ಕೈಗಾರಿಕೆಗಳು ವಿವಿಧ ತ್ಯಾಜ್ಯ ಸಂಸ್ಕರಣ ಘಟಕಗಳ ಮೂಲಕ ತ್ಯಾಜ್ಯ ನೀರನ್ನು ಶುದ್ದೀಕರಿಸಿ ಬಿಡುತ್ತಿವೆ. 17 ಕೈಗಾರಿಕೆಗಳು ಮುಚ್ಚಿವೆ. 13 ಕೈಗಾರಿಕೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿವೆ. ಇನ್ನು 14 ಕೈಗಾರಿಕೆಗಳು ತಮ್ಮ ಕಾರ್ಯಾಚರಣೆ ವಿಧಾನದ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಿವರಗಳನ್ನು ನೀಡಿವೆ. 

ಹೆಬ್ಬಗೋಡಿ, ಬೊಮ್ಮಸಂದ್ರ, ಜಿಗಣಿ ಮತ್ತು ಚಂದಾಪುರ ಭಾಗದಲ್ಲಿ ಒಳಚರಂಡಿ ಮಾರ್ಗವನ್ನು (ಯುಜಿಡಿ) ಮರು ನಿರ್ಮಾಣ ಮಾಡಲಾಗುತ್ತಿದೆ. ಹೆಬ್ಬಗೋಡಿ, ಬೊಮ್ಮಸಂದ್ರ, ಜಿಗಣಿ ಮತ್ತು ಚಂದಾಪುರದಲ್ಲಿ ನಾಲ್ಕು ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.