ಮಧು ಬಂಗಾರಪ್ಪ
ಬೆಳಗಾವಿ: 'ದೀಪಾವಳಿ ನಂತರ ನಮ್ಮ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಅವರು ಇನ್ನೂ ನಾಲ್ಕು ದೀಪಾವಳಿ ಮುಗಿಯುವವರೆಗೆ ಕಾಯಬೇಕು' ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯ ಮಾಡಿದರು.
'ದೀಪಾವಳಿ ನಂತರ ಕಾಂಗ್ರೆಸ್ ಸರ್ಕಾರ ಬೀಳುತ್ತದೆ' ಎಂಬ ಬಿಜೆಪಿ ನಾಯಕರ ಮಾತಿಗೆ ನಗರದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ' ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಂಡು ಬಿಜೆಪಿ, ಜೆಡಿಎಸ್ ಹೆದರಿಬಿಟ್ಟಿವೆ' ಎಂದರು.
'ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ತಪ್ಪು ಏನೂ ಇಲ್ಲ ಎಂಬುದು ಬಿಜೆಪಿಯವರಿಗೂ ಗೊತ್ತಿದೆ. ನಮ್ಮಲ್ಲಿ ನ್ಯಾಯ ವ್ಯವಸ್ಥೆ ಇದೆ. ಅಲ್ಲಿ ಸತ್ಯವಾದುದು ನಡೆಯುತ್ತದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎನ್ನುವುದು ನಮ್ಮೆಲ್ಲರ ಆಸೆ' ಎಂದರು.
'ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೂ ಪ್ರಕರಣಗಳಿವೆ. ಆದರೆ ಬಿಜೆಪಿಯವರಿಗೆ ಸಿದ್ದರಾಮಯ್ಯ ಮಾತ್ರ ಕಾಣಿಸುತ್ತಾರೆ. ನಮ್ಮ ತಂದೆ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಾನು ಸಾಕಷ್ಟು ಪ್ರಕರಣಗಳನ್ನು ನೋಡಿದ್ದೇನೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದರು.
'ಇದೂವರೆಗೆ ಬಿಜೆಪಿ ರಾಜ್ಯದಲ್ಲಿ ಒಮ್ಮೆಯೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಸುಭದ್ರ ಸರ್ಕಾರ ಇರುವುದು ಅವರಿಗೆ ಇಷ್ಟವಿಲ್ಲ. ಬರೀ ಸರ್ಕಾರ ಬೀಳಿಸುವ ಮಾತನಾಡುತ್ತಾರೆ. ಹಾಗಾಗಿ ಅವರು 'ಬಾಂಬೆ ಬಾಯ್ಸ್' ಎಂದೇ ಖ್ಯಾತರಾಗಿದ್ದಾರೆ. ಇಂಥ ಸಂಪ್ರದಾಯ ಇರುವ ಪಕ್ಷ ರಾಜ್ಯಕ್ಕೆ ಬೇಕೆ?' ಎಂದು ಪ್ರಶ್ನೆಯೊಂದಕ್ಕೆ ಮರುಪ್ರಶ್ನೆ ಮಾಡಿದರು.
'ಶಿಕ್ಷಕರಿಗೆ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದರೆ, ಬೇರೆ ಬೇರೆ ಕಾರಣಗಳಿಗೆ ಶಾಲೆಗಳಿಂದ ದೂರ ಉಳಿದು, ಮಕ್ಕಳಿಗೆ ತೊಂದರೆ ಮಾಡಬಾರದು. ಶಾಲೆಯಲ್ಲಿ ಮಕ್ಕಳಿಗೆ ನಿರಂತರ ಪಾಠ ಮಾಡಬೇಕು. ಅದನ್ನು ಬಿಟ್ಟು ಬೇರೆ ಬೇರೆ ಕೆಲಸ, ಸಂಘಟನೆಯಲ್ಲಿ ಗುರುತಿಸಿಕೊಂಡರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು' ಎಂದೂ ಸಚಿವ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.