ಬೆಂಗಳೂರು: ‘ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದ ಯುದ್ಧದಲ್ಲಿ ಭಾರತೀಯ ಸೇನೆ ಜಯ ಗಳಿಸಿದ ಸ್ಮರಣಾರ್ಥ ವಿಜಯ ದಿವಸವನ್ನು ಇಂದು (ಬುಧವಾರ) ಆಚರಿಸಲಾಗುತ್ತಿದೆ.ಈ ಯುದ್ದದಲ್ಲಿ ತ್ಯಾಗ, ಬಲಿದಾನ ಮಾಡಿದ ಭಾರತೀಯ ಯೋಧರನ್ನು ಸ್ಮರಿಸುವ ಜೊತೆಗೆ, ಅವರ ಸುಖ, ದುಃಖ, ಸಂಕಷ್ಟದಲ್ಲಿ ಸಮಾನ ಭಾಗಿಗಳಾಗುವುದು ನಮ್ಮೆಲ್ಲರ ಕರ್ತವ್ಯ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ನೆಹರು ತಾರಾಲಯದ ಮುಂಭಾಗದಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಮಾರಕ ಎದುರು ಆಯೋಜಿಸಲಾಗಿದ್ದ ‘ವಿಜಯ ದಿವಸ್’ ಸಮಾರಂಭ ಹಾಗೂ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
’1971ರಲ್ಲಿ ಈ ದಿನ, ಪಾಕಿಸ್ತಾನ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಮತ್ತು 91 ಸಾವಿರ ಸೈನಿಕರು ಭಾರತ ಸೇನೆ ಮತ್ತು ಮುಕ್ತಿ ಭಾಹಿನಿ ಒಳಗೊಂಡ ಮಿತ್ರ ಪಡೆಗಳಿಗೆ ಶರಣಾದರು. ಈ ಯುದ್ಧದಲ್ಲಿ ದೇಶದ 3 ಸಾವಿರ ಸೈನಿಕರು ಪ್ರಾಣ ತ್ಯಾಗ ಮಾಡಿದರು. ಸುಮಾರು 10 ಸಾವಿರ ಸೈನಿಕರು ಗಾಯಗೊಂಡರು. ಕರ್ನಾಟಕದ 58 ಸೈನಿಕರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು, 16 ಸೈನಿಕರು ಗಾಯಗೊಂಡರು. ಕೆಲವರು ಅಂಗವಿಕಲರಾದರು: ಎಂದು ನೆನಪಿಸಿದರು.
‘ದೇಶದ ಭದ್ರತೆ, ಸುರಕ್ಷತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೆಚ್ಚಿನ ಪ್ರಾಧಾನ್ಯ ನೀಡಿದೆ. ನಮ್ಮ ಸಶಸ್ತ್ರ ಪಡೆಗಳು ನಮ್ಮ ಪ್ರಜಾಪ್ರಭುತ್ವ ಹಾಗೂ ದೇಶದ ಸಮಗ್ರತೆಯನ್ನು ಕಾಪಾಡುವ ಆಧಾರಸ್ತಂಭಗಳಾಗಿವೆ. ಪ್ರತಿಕೂಲ ಹವಾಮಾನ, ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಶತ್ರುಗಳೊಂದಿಗೆ ಹೋರಾಡಿ, ದೇಶವನ್ನು ರಕ್ಷಿಸುವ ಯೋಧರ ಶೌರ್ಯ, ಸಾಹಸಗಾಥೆಗಳು ಸ್ಮರಣೀಯ’ ಎಂದರು.
‘ಪ್ರಕೃತಿ ವಿಪತ್ತಿನ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗೂ ಮುನ್ನುಗ್ಗುವ ಈ ಯೋಧರ ಸಮರ್ಪಣಾ ಭಾವ, ಬದ್ಧತೆ ಅನುಕರಣೀಯ. ಭಾರತದ ಸೇನಾಪಡೆಯಲ್ಲಿ ಕರ್ನಾಟಕದ ಕೊಡುಗೆಯೂ ಮಹತ್ತರವಾಗಿದೆ. ಇಬ್ಬರು ಜನರಲ್‌ಗಳು, ಒಬ್ಬರು ಫೀಲ್ಡ್ ಮಾರ್ಷಲ್ ಹಾಗೂ ಅಸಂಖ್ಯ ಸೇನಾಧಿಕಾರಿಗಳು, ಯೋಧರನ್ನು ಕರ್ನಾಟಕ ಕೊಡುಗೆಯಾಗಿ ನೀಡಿದೆ. ಈ ವೀರಪುತ್ರರನ್ನು ಮರೆಯುವಂತಿಲ್ಲ. ಸೈನಿಕರ ಕುಟುಂಬದವರ ಯೋಗಕ್ಷೇಮ ಮತ್ತು ರಕ್ಷಣೆಗಾಗಿಯೇ ಸೈನಿಕ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸುತ್ತಿದೆ’ ಎಂದೂ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.