ADVERTISEMENT

ಸಿಗರೇಟ್‌ ವರ್ತಕರನ್ನು ಸುಲಿದ ಅಧಿಕಾರಿಗಳಿಂದ ₹ 22 ಲಕ್ಷ ವಶ

ಸಿಗರೇಟ್‌ ವರ್ತಕರನ್ನು ‘ಸುಲಿದ’ ಸಿಸಿಬಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 11 ಮೇ 2020, 2:01 IST
Last Updated 11 ಮೇ 2020, 2:01 IST
   

ಬೆಂಗಳೂರು: ಲಾಕ್‌ಡೌನ್‌ ಸಮಯವನ್ನು ಸಿಸಿಬಿಯ ಕೆಲವು ಅಧಿಕಾರಿಗಳು ಸಿಗರೇಟ್‌ ವರ್ತಕರು ಹಾಗೂ ವಿತರಕರ ‘ಸುಲಿಗೆ’ಗೆ ಬಳಸಿಕೊಂಡಿದ್ದು, ಸದ್ಯದ ಅಂದಾಜಿನ ಪ್ರಕಾರ ₹ 1.75ಕೋಟಿ ದೋಚಿದ್ದಾರೆ ಎಂಬ ಸಂಗತಿ ತನಿಖೆಯಿಂದ ಬಯಲಾಗಿದೆ.

ಪ್ರಕರಣದ ಆರೋಪಿಗಳಾದ ಎಸಿಪಿ ಪ್ರಭುಶಂಕರ್‌, ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಮತ್ತು ನಿರಂಜನ ಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ. ಮೂವರಿಂದ ₹ 52 ಲಕ್ಷ ವಶಪಡಿಸಿಕೊಳ್ಳಲಾಗಿದೆ.

ಪ್ರಭುಶಂಕರ್‌ ಬಳಿ ₹ 30 ಲಕ್ಷ, ನಿರಂಜನ‌ ಮತ್ತು ಅಜಯ್ ಬಳಿ ಕ್ರಮವಾಗಿ ₹ 12 ಲಕ್ಷ ಹಾಗೂ ₹ 10 ಲಕ್ಷ ಸಿಕ್ಕಿದೆ. ಪ್ರತಿಷ್ಠಿತ ಕಂಪನಿ ಸಿಗರೇಟ್‌ ವಿತರಕರಾಗಿರುವ ಎಂ.ಡಿ‌. ಸನ್ಸ್‌ ಒಂದರಿಂದಲೇ ಪ್ರಭುಶಂಕರ್‌ ₹ 62.5 ಲಕ್ಷ ‘ವಸೂಲು’ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ADVERTISEMENT

ಇದಲ್ಲದೆ, ಬೇರೆ ಕಂಪನಿಗಳ ಸಿಗರೇಟ್‌ ವಿತರಕರಿಂದ ಹಣ ಕಿತ್ತಿದ್ದಾರೆನ್ನಲಾದ ಅಜಯ್‌ ಮತ್ತು ನಿರಂಜನ, ಶ್ರೀನಗರದಲ್ಲಿ ಅಂಗಡಿ ಇಟ್ಟುಕೊಂಡಿರುವ ಸಂತೋಷ್‌ ಎಂಬುವರಿಂದ ₹ 15 ಲಕ್ಷ ದೋಚಿದ್ದಾರೆ ಎಂದೂ ಮೂಲಗಳು ಹೇಳಿವೆ.

ಲಾಕ್‌ಡೌನ್‌ ವೇಳೆ ಸಿಗರೇಟ್‌ ಮಾರಾಟ ನಿಷೇಧವಿದ್ದರೂ ಸಂತೋಷ್‌ ಅಂಗಡಿಯಲ್ಲಿ ಮಾರುತ್ತಿದ್ದಾಗ ಇನ್‌ಸ್ಪೆಕ್ಟರ್‌ಗಳ ಕೈಗೆ ಸಿಕ್ಕಿಬಿದ್ದರು. ಅವರ ಬಳಿ ₹ 23 ಲಕ್ಷ ಮೌಲ್ಯದಷ್ಟು ಸರಕಿತ್ತು. ಲಂಚ ಕೊಡದಿದ್ದರೆ ಕೇಸ್‌ ಹಾಕಿ ಜೈಲಿಗಟ್ಟುವುದಾಗಿ ಅಧಿಕಾರಿಗಳು ಬೆದರಿಸಿದರು. ಹಣವಿಲ್ಲದ ವ್ಯಾಪಾರಿ, ತನ್ನ ಸೋದರನ ಪತ್ನಿಯ ಒಡವೆ ಅಡಮಾನ ಇಡಲು ಹೋಗಿದ್ದರು. ಅದರಿಂದ ಹೆಚ್ಚು ಸಿಗುವುದಿಲ್ಲ ಎಂದು ಗೊತ್ತಾದಾಗ ಅಧಿಕಾರಿಗಳು ಅದನ್ನು ₹ 15 ಲಕ್ಷಕ್ಕೆ ಮಾರಿಸಿ ಹಣ ಕಿತ್ತುಕೊಂಡರು ಎಂದು ಮೂಲಗಳು ವಿವರಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಲು ಅಜಯ್‌ ನಿರಾಕರಿಸಿದರು.

ಪಿ.ಸಿ ಕಾಯ್ದೆಯಡಿ ಪ್ರಕರಣ?

ಸಿಗರೇಟ್‌ ಲಂಚ ಪ್ರಕರಣ ಕೆದಕಿದಷ್ಟು ನಿಗೂಢವಾಗುತ್ತಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ (ಪಿ.ಸಿ ಆ್ಯಕ್ಟ್‌) ಮೊಕದ್ದಮೆ ದಾಖಲಿಸಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಗೆ ಒಪ್ಪಿಸುವ ಸಾಧ್ಯತೆಯಿದೆ.

‘ಈ ಪ್ರಕರಣದ ಪ್ರಾಥಮಿಕ ವಿಚಾರಣಾ ವರದಿ ಬಂದಿದೆ. ಅದರ ಆಧಾರದ ಮೇಲೆ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ. ಸಮಗ್ರ ವಿಚಾರಣಾ ವರದಿ ಒಂದೆರಡು ದಿನಗಳಲ್ಲಿ ಬರಲಿದ್ದು, ಆನಂತರ ಯಾವ ಸಂಸ್ಥೆಯಿಂದ ತನಿಖೆ ನಡೆಸಬೇಕೆಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಡಿಜಿಪಿ ಮತ್ತು ಐಜಿಪಿ ಪ್ರವೀಣ್‌ ಸೂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.