ADVERTISEMENT

ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ಹೂಮಳೆ ಸುರಿಸುತ್ತಿದೆಯೆ?: ಸಿದ್ದರಾಮಯ್ಯ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 16:15 IST
Last Updated 25 ಡಿಸೆಂಬರ್ 2023, 16:15 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಬೆಂಗಳೂರು: ‘ಕರ್ನಾಟಕದಲ್ಲಿ ಬರಗಾಲ ಬಂದು ಆರು ತಿಂಗಳಾದರೂ ಪರಿಹಾರ ನೀಡದ, ತೆರಿಗೆಯಲ್ಲೂ ಸರಿಯಾಗಿ ಪಾಲು ಕೊಡದ, 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ವಂಚಿಸಿರುವ ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ಸುರಿಸುತ್ತಿರುವುದು ಹೂವಿನ ಮಳೆಯೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿದೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರ ಟೀಕೆಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ADVERTISEMENT

‘₹ 18,177 ಕೋಟಿ ಬರ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ. ನಾನೇ ಖುದ್ದಾಗಿ ಹೋಗಿ ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿಮಾಡಿ ರೈತರ ಕಷ್ಟಗಳನ್ನು ವಿವರಿಸಿದ್ದೇನೆ. ಕಂದಾಯ ಸಚಿವರೂ ಕೃಷಿ ಮತ್ತು ಹಣಕಾಸು ಸಚಿವರನ್ನು ಭೇಟಿ ಮಾಡಿದ್ದಾರೆ. ಈವರೆಗೆ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಕನ್ನಡಿಗ ರೈತರ ಮೇಲೆ ಕಲ್ಲು ಹಾಕುತ್ತಿರುವವರು ಯಾರು’ ಎಂದು ಅಶೋಕ ಅವರನ್ನು ಪ್ರಶ್ನಿಸಿದ್ದಾರೆ.

‘ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳ ಅನುದಾನದ ಮೊತ್ತವನ್ನು ₹ 20,000 ಕೋಟಿಗಳಿಂದ ₹ 13,000 ಕೋಟಿಗಳಿಗೆ ಇಳಿಕೆ ಮಾಡಲಾಗಿದೆ. 15ನೇ ಹಣಕಾಸು ಆಯೋಗದಲ್ಲಿ ಅನುದಾನ ಹಂಚಿಕೆಯಲ್ಲಿ ಇಳಿಕೆ ಮಾಡಿದ್ದರಿಂದ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ₹ 45,000 ಕೋಟಿಗಳಷ್ಟು ವಂಚನೆಯಾಗಿದೆ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ₹ 5,495 ಕೋಟಿ ವಿಶೇಷ ಅನುದಾನವನ್ನೂ ಕೊಟ್ಟಿಲ್ಲ. ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿದ್ದು ನಿಮ್ಮದೇ ಪಕ್ಷದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಾ? ನಾವಾ?’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಕರ್ನಾಟಕದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆರಂಭಿಸಬೇಕೆಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಬೆಂಗಳೂರು ಉಪ ನಗರ ರೈಲು ಯೋಜನೆಗೆ ₹ 18,000 ಕೋಟಿ ಅನುದಾನವನ್ನೂ ಒದಗಿಸಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೇಂದ್ರದಿಂದ ಅನುದಾನ ಬರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬೆದರಿಕೆ ಹಾಕಿದ್ದರು. ಚುನಾವಣೆಯಲ್ಲಿ ಬಿಜೆಪಿಗೆ ನೀಡಿದ ಪೆಟ್ಟಿಗಾಗಿ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಲಾಗುತ್ತಿದೆಯೆ ಎಂದು ಪ್ರಶ್ನಿಸಿದ್ದಾರೆ.

‘ಮನುಸ್ಮೃತಿ ಪಳೆಯುಳಿಕೆ ಸುಡಬೇಕು’

‘ಜಾತಿ ಮತ್ತು ಲಿಂಗ ತಾರತಮ್ಯವನ್ನು ಸಾರುವ ಅಲಿಖಿತ ಸಂವಿಧಾನ ಮನುಸ್ಮೃತಿಯನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸುಟ್ಟು ಹಾಕಿದ್ದರು. ಈಗ ನಾವೆಲ್ಲರೂ ನಮ್ಮೊಳಗೆ ಇನ್ನೂ ಉಳಿದಿರಬಹುದಾದ ಮನುಸ್ಮೃತಿ ಪಳೆಯುಳಿಕೆಗಳನ್ನು ಸುಟ್ಟು ಹಾಕಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ‘ಮನುಸ್ಮೃತಿ ದಹನ ದಿನ’ದ ಪ್ರಯುಕ್ತ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸೋಮವಾರ ಸಂದೇಶ ಹಾಕಿರುವ ಅವರು ‘ಆ ಅಲಿಖಿತ ಸಂವಿಧಾನದ ನಾಶವಾಗದೆ ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ನೀಡಿರುವ ಲಿಖಿತ ಸಂವಿಧಾನದ ಸಂಪೂರ್ಣ ಅನುಷ್ಠಾನ ಅಸಾಧ್ಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.