ADVERTISEMENT

ಕಾಲೇಜು ಉಪನ್ಯಾಸಕರ ವರ್ಗಾವಣೆಗೂ ಕೌನ್ಸೆಲಿಂಗ್‌

ವೃಂದ ಬಲದ ಶೇ 12ರಷ್ಟು ಮಂದಿಗೆ ಮಾತ್ರ ವರ್ಗಾವಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 18:55 IST
Last Updated 1 ಅಕ್ಟೋಬರ್ 2020, 18:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸರ್ಕಾರಿ ಪದವಿ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳ (ಐಟಿಐ) ಬೋಧಕ ಸಿಬ್ಬಂದಿ ಪೈಕಿ ವಾರ್ಷಿಕ ಶೇ 12ರಷ್ಟು ಮಂದಿಯನ್ನು ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸುವ ಹೊಸ ಸೇವಾ ನಿಯಮಗಳಿಗೆ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

ಈ ಹಿಂದೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳು ರೂಪಿಸಿಕೊಂಡಿದ್ದ ನಿಯಮಗಳ ಆಧಾರದಲ್ಲಿ ಈ ಉಪನ್ಯಾಸಕರ ವರ್ಗಾವಣೆ ನಡೆಯುತ್ತಿತ್ತು. ಈ ನಿಯಮಗಳನ್ನು ಸೆಪ್ಟೆಂಬರ್‌ ತಿಂಗಳಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ನಿರಸನಗೊಳಿಸಲಾಗಿತ್ತು.

ಇದಕ್ಕೆ ಪರ್ಯಾಯವಾಗಿ ರೂಪಿಸಿರುವ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು– 2020 ಹಾಗೂಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು–2020ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ADVERTISEMENT

ಹೊಸ ನಿಯಮಗಳ ಪ್ರಕಾರ, ರಾಜ್ಯವನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ‘ಎ’ ವಲಯಕ್ಕೆ, ಇತರೆ ಮಹಾನಗರ ಪಾಲಿಕೆಗಳು ‘ಬಿ’ ವಲಯಕ್ಕೆ, ಎಲ್ಲ ಜಿಲ್ಲಾ ಕೇಂದ್ರಗಳು ‘ಸಿ’ ವಲಯಕ್ಕೆ ಮತ್ತು ಉಳಿದ ಪ್ರದೇಶಗಳು ‘ಡಿ’ ವಲಯಕ್ಕೆ ಸೇರುತ್ತವೆ. ಒಂದು ವಲಯದಲ್ಲಿ ಕನಿಷ್ಠ ನಾಲ್ಕು ವರ್ಷ ಕಾರ್ಯನಿರ್ವಹಿಸಿದವರು ಮಾತ್ರ ಇನ್ನೊಂದು ವಲಯಕ್ಕೆ ವರ್ಗಾವಣೆ ಪಡೆಯಲು ಅರ್ಹತೆ ಹೊಂದಿರುತ್ತಾರೆ.

ಹಳೆಯ ಪದ್ಧತಿಗೆ ತಿಲಾಂಜಲಿ:ಹೊಸ ನಿಯಮಗಳ ಪ್ರಕಾರ, ವರ್ಗಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ ಮೂಲಕವೇ ನಡೆಯುತ್ತದೆ. ಹಿಂದಿನಂತೆ ಶಾಸಕರು, ಗಣ್ಯ ವ್ಯಕ್ತಿಗಳಿಂದ ಶಿಫಾರಸು ಪತ್ರ ಪಡೆದು ವರ್ಗಾವಣೆ ಮಾಡಲು ಅವಕಾಶವಿರುವುದಿಲ್ಲ.

ಎರಡೂ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ, ಆನ್‌ಲೈನ್‌ನಲ್ಲಿ ಮಾಹಿತಿ ಅಪ್ಲೋಡ್‌ ಮಾಡಿದ ಬಳಿಕ ವರ್ಗಾವಣೆಗೆ ಅರ್ಹರಾಗಿದ್ದು, ಅರ್ಜಿ ಸಲ್ಲಿಸಿದವರನ್ನು ಕೌನ್ಸೆಲಿಂಗ್‌ಗೆ ಆಹ್ವಾನಿಸಲಾಗುತ್ತದೆ. ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆಯ ಸ್ಥಳ ನಿಗದಿ ಮಾಡಲಾಗುತ್ತದೆ.

ಶೇಕಡವಾರು ನಿಗದಿ:ಒಟ್ಟು ಬೋಧಕ ಸಿಬ್ಬಂದಿಯಲ್ಲಿ ಶೇ 12ರಷ್ಟು ಜನರನ್ನು ವರ್ಗಾವಣೆ ಮಾಡಬಹುದು. ಈ ಪೈಕಿ ಶೇ 6ರಷ್ಟು ಸ್ಥಾನಗಳನ್ನು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದಂತೆ, ಶೇ 3ರಷ್ಟನ್ನು ಗಂಡ– ಹೆಂಡತಿ ಪ್ರಕರಣಗಳಿಗೆ, ಅಂಗವಿಕಲರು, ಒಬ್ಬಂಟಿ ಪೋಷಕರು ಮತ್ತು ಗಂಭೀರ ಸ್ವರೂಪದ ಅನಾರೋಗ್ಯ ಪ್ರಕರಣಗಳಿಗೆ ತಲಾ ಶೇ 1ರಷ್ಟು ಹಂಚಿಕೆ ಮಾಡಲಾಗಿದೆ.

‘ಅನುಮತಿ ಸಿಕ್ಕಿದರೆ ವರ್ಗಾವಣೆ’

‘ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತ್ತು ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಉಪನ್ಯಾಸಕರ ವರ್ಗಾವಣೆಗೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಕೋರಲಾಗುವುದು. ಒಪ್ಪಿಗೆ ಸಿಕ್ಕರೆ ಮಾತ್ರ ತಕ್ಷಣ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.