ADVERTISEMENT

ವೈದ್ಯಕೀಯ ಶಿಕ್ಷಣ ಮತ್ತಷ್ಟು ದುಬಾರಿ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 19:11 IST
Last Updated 23 ಫೆಬ್ರುವರಿ 2019, 19:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಶಿಕ್ಷಣ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು (ಕಾಮೆಡ್‌–ಕೆ) ವೈದ್ಯಕೀಯ ಸ್ನಾತಕೋತ್ತರ ಪದವಿಯ ಶುಲ್ಕವನ್ನು ಶೇ 15ರಷ್ಟು ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

‘ಶುಲ್ಕ ಹೆಚ್ಚಳಕ್ಕೆ ನಾವು ನೀಡಿದ ಸಕಾರಣಗಳನ್ನು ಸರ್ಕಾರದ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ. ಹೆಚ್ಚಳದ ಆದೇಶ ಆದಷ್ಟು ಬೇಗ ಹೊರಬೀಳಲಿದೆ’ ಎಂದುಕಾಮೆಡ್‌–ಕೆ ಅಧ್ಯಕ್ಷಎಂ.ಆರ್‌.ಜಯರಾಮ್‌ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ADVERTISEMENT

‘ರಾಜ್ಯದಲ್ಲಿನ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೇಲೆ ಆರ್ಥಿಕ ಹೊರೆ ಪ್ರತಿವರ್ಷ ಹೆಚ್ಚುತ್ತಿದೆ. ಸಂಯೋಜಿತ ವೈದ್ಯಕೀಯ ಕಾಲೇಜು ಪ್ರತಿ ವಿದ್ಯಾರ್ಥಿಯ ಅಧ್ಯಯನಕ್ಕೆ ವರ್ಷಕ್ಕೆ ₹ 8.39 ಲಕ್ಷ ಖರ್ಚು ಮಾಡುತ್ತಿವೆ. ಆದರೆ, ವಿದ್ಯಾರ್ಥಿಯೊಬ್ಬರಿಂದ ಸರಾಸರಿ ₹ 6.44 ಲಕ್ಷ ಮಾತ್ರ ಪಡೆಯುತ್ತಿದೆ. ಈ ಹೊರೆಯ ಅಂತರವನ್ನು ಕಡಿಮೆಗೊಳಿಸಲು ಶುಲ್ಕ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೇವೆ’ ಎಂದು ಹೇಳಿದರು.

‘ಈ ಹಿಂದೆ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತಿತ್ತು. ಈಗ ವಿದ್ಯಾರ್ಥಿಗಳ ಸಂಖ್ಯೆಯೊಂದಿಗೆ ಗುಣಮಟ್ಟಕ್ಕೂ ಆದ್ಯತೆ ನೀಡಬೇಕಿದೆ. ಕಾಲೇಜು ಒಂದರ ವಾರ್ಷಿಕ ನಿರ್ವಹಣಾ ವೆಚ್ಚವೇ ಸರಾಸರಿ ₹ 55 ಕೋಟಿ ದಾಟುತ್ತಿದೆ. ಅಲ್ಲದೆ, ಸಂಯೋಜಿತ ಸಂಸ್ಥೆಯಲ್ಲಿನ ಪ್ರತಿ ವೈದ್ಯಕೀಯ ಸಂಶೋಧಕರಿಗೆ ಕೇವಲ ₹ 58 ಸಾವಿರ, ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿನ ಸಂಶೋಧಕರಿಗೆ ₹ 1.05 ಲಕ್ಷ ಮಾತ್ರ ಪ್ರೋತ್ಸಾಹ ಸಿಗುತ್ತಿದೆ. ಸಂಶೋಧನೆಗಳಿಗೆ ಒತ್ತು ನೀಡಲು, ನಮ್ಮ ಸಂಸ್ಥೆಗಳು ಆರ್ಥಿಕವಾಗಿ ಸಬಲವಾಗಬೇಕಿದೆ’ ಎಂದರು.

ಸರ್ಕಾರ ಒಪ್ಪಿದೆಯೇ ಇಲ್ಲವೇ ಎಂಬ ಬಗ್ಗೆ ಪ್ರತಿಕ್ರಿಯೆ ಪಡೆಯಲು ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಅವರಿಗೆ ಕರೆ ಮಾಡಿದರೆ ಅವರು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.