ADVERTISEMENT

ಲಾಭದ ಖಾತೆಗಾಗಿ ಪಟ್ಟು ಹಿಡಿದಿರುವ ಹೊಸ ಸಚಿವರು: ಕಿಡಿ ಕಾರುತ್ತಿದ್ದಾರೆ ಅತೃಪ್ತರು

ರಾಜೀನಾಮೆ ಸುಳಿವು ಕೊಟ್ಟ ರಮೇಶ ಜಾರಕಿಹೊಳಿ: ರಾಮಲಿಂಗಾ ರೆಡ್ಡಿ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 1:28 IST
Last Updated 25 ಡಿಸೆಂಬರ್ 2018, 1:28 IST
ರಮೇಶ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ರಾಮಲಿಂಗಾ ರೆಡ್ಡಿ
ರಮೇಶ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ರಾಮಲಿಂಗಾ ರೆಡ್ಡಿ   

ಬೆಂಗಳೂರು: ಬಂಡಾಯವನ್ನು ಸಹಿಸುವುದಿಲ್ಲ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಕಟು ಎಚ್ಚರಿಕೆ ನೀಡಿದ ಬಳಿಕ ಅತೃಪ್ತರು ಮೌನಕ್ಕೆ ಶರಣಾಗಿದ್ದರೆ, ಎದ್ದೂಬಿದ್ದೂ ಸಚಿವ ಸ್ಥಾನ ಪಡೆದ ‘ಕೈ’ ಪಾಳಯದ ಹೊಸ ಸಚಿವರು ಲಾಭದ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ.

ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಆರಂಭದಲ್ಲೇ ಸಚಿವರಾದವರು ಪ್ರಬಲ ಖಾತೆಗಳನ್ನು ಹಿಡಿದುಕೊಂಡಿದ್ದು, ಈಗಷ್ಟೇ ಸೇರಿದವರಿಗೆ ಲಾಭಕಟ್ಟಿನ ಖಾತೆ ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ಪ್ರಭಾವಿ ಖಾತೆಗಳೇ ತಮಗೆ ಬೇಕು ಎಂದು ಹೊಸ ಸಚಿವರು ಪಟ್ಟು ಹಿಡಿದಿದ್ದಾರೆ.

‘ನೀ ಕೊಡೆ ನಾ ಬಿಡೆ’ ಎಂಬ ಆಟ ಸಚಿವರ ಮಧ್ಯೆ ನಡೆಯುತ್ತಿದ್ದು, ಖಾತೆ ಹಂಚಿಕೆ ವರಿಷ್ಠರಿಗೆ ಕಗ್ಗಂಟಾಗಿದೆ. ಸೋಮವಾರ ಸಂಜೆ ನಗರಕ್ಕೆ ಬರಬೇಕಾಗಿದ್ದ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತಮ್ಮ ಭೇಟಿಯನ್ನು ಮಂಗಳವಾರ ಸಂಜೆಗೆ ಮುಂದೂಡಿದ್ದಾರೆ. ಅವರು ಬಂದ ಬಳಿಕವಷ್ಟೇ ಖಾತೆ ಹಂಚಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಮೌನ’ ಬಂಡಾಯ

ಮೈತ್ರಿ ಸರ್ಕಾರದಲ್ಲಿ ಅಸ್ತಿತ್ವಕ್ಕೆ ಬಂದ ಹೊತ್ತಿನಲ್ಲಿ ಸಚಿವ ಸ್ಥಾನ ಸಿಗದ ಶಾಸಕರ ಬೆಂಬಲಿಗರು ವಾರಪೂರ್ತಿ ಬೀದಿ ರಂಪಾಟ ನಡೆಸಿದ್ದರು. ಶನಿವಾರ ಸಂಪುಟ ಪುನಾರಚನೆಯಾದ ಬಳಿಕವೂ ಅತೃಪ್ತ ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.

‘ಅಶಿಸ್ತನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪಕ್ಷ ನಿಷ್ಠರಿಗೆ ಸ್ಥಾನಮಾನ ಸಿಕ್ಕೇ ಸಿಗುತ್ತದೆ. ಕಾಯಬೇಕಷ್ಟೇ’ ಎಂದು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಎಚ್ಚರಿಕೆ ನೀಡಿದರು. ಈ ಸೂಚನೆಯನ್ನು ಅತೃಪ್ತರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರವಾನಿಸಿದರು. ಅದಾದ ಬಳಿಕ ಅತೃಪ್ತರು ಹಾಗೂ ಬೆಂಬಲಿಗರು ತಣ್ಣಗಾಗಿದ್ದಾರೆ.

ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದರಿಂದ ಮುನಿಸಿಕೊಂಡಿದ್ದ ರಮೇಶ ಜಾರಕಿಹೊಳಿ ಅವರು ಈಗ ಸ್ವಲ್ಪ ಮೆತ್ತಗಾಗಿದ್ದಾರೆ. ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಅವರ ಸಮಾಧಾನಕ್ಕೆ ಕಾರಣ. ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡುವ ಮುಖೇನ ಅವರನ್ನು ಓಲೈಸಲು ನಾಯಕರು ಮುಂದಾಗಿದ್ದಾರೆ.

ಸಿಡಿಮಿಡಿಗೊಳ್ಳುತ್ತಲೇ ಮಾಧ್ಯಮ ಪ್ರತಿನಿಧಿಗಳ ಜತೆ ಸೋಮವಾರ ಮಾತನಾಡಿದ ರಮೇಶ ಜಾರಕಿಹೊಳಿ, ‘ಶಾಸಕ ಸ್ಥಾನಕ್ಕೆ ನೀಡುವುದಾಗಿ ಹೇಳಿದ ಮಾತಿಗೆ ಬದ್ಧ. ನಾಲ್ಕೈದು ದಿನ ಕಾದು ನೋಡಿ’ ಎಂದು ಹೇಳಿದ್ದಾರೆ.ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಬೆಂಬಲಿಗರು ಬೆಂಗಳೂರು ಹಾಗೂ ಆನೇಕಲ್‌ನಲ್ಲಿ ಪ್ರತಿಭಟನೆ ನಡೆಸಿ ಅಸಮಾಧಾನ ತೋರ್ಪಡಿಸಿದರು.

ಏತನ್ಮಧ್ಯೆ, ರಾಮಲಿಂಗಾ ರೆಡ್ಡಿ ಅವರನ್ನು ಸೆಳೆಯಲು ಬಿಜೆ‍ಪಿ ಯತ್ನಿಸಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಶಾಸಕರಾದ ಎಂ.ಸತೀಶ ರೆಡ್ಡಿ ಹಾಗೂ ಎಂ.ಕೃಷ್ಣಪ್ಪ ಅವರು ಭಾನುವಾರ ರಾತ್ರಿ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ‘ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಟ್ಟು ಬರುವುದಿಲ್ಲ ಎಂದು ರೆಡ್ಡಿ ಪ್ರತಿಕ್ರಿಯಿಸಿದರು’ ಎಂದು ಗೊತ್ತಾಗಿದೆ.

ರೆಡ್ಡಿ ಅವರಿಗೆ ಕರೆ ಮಾಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಮನವೊಲಿಸುವ ಯತ್ನ ಮಾಡಿದ್ದಾರೆ.

ಎಚ್ಚರಿಕೆ

ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವವರನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶ ರವಾನಿಸಲು ದಿನೇಶ್‌ ಗುಂಡೂರಾವ್‌ ಸೋಮವಾರ ಕಸರತ್ತು ನಡೆಸಿದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಮೂವರನ್ನು ಉಚ್ಚಾಟಿಸಲಾಗಿದೆ ಎಂದು ಪ‍್ರಕಟಿಸಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಹೊಗಳುಭಟ್ಟರೇ ಬೇಕು

ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ‘ಅವರಿಗೆ ಹೊಗಳುಭಟ್ಟರೇ ಬೇಕು. ನಾನು, ರಾಮಲಿಂಗಾ ರೆಡ್ಡಿ, ಬಿ.ಸಿ. ಪಾಟೀಲ ಯಾರನ್ನೂ ಹೊಗಳುತ್ತಿಲ್ಲ. ಹೀಗಾಗಿ ನಮ್ಮನ್ನೆಲ್ಲ ಕಡೆಗಣಿಸಿದ್ದಾರಷ್ಟೆ. ಇದು ಬಹಳ ದಿನ ನಡೆಯಲ್ಲ. ಚಾಮುಂಡೇಶ್ವರಿ ಪಾಠ ಮರುಕಳಿಸಲಿದೆ’ ಎಂದು ಎಚ್ಚರಿಸಿದರು.

‘ರಾಹುಲ್‌ ಗಾಂಧಿ ಅವರಿಗೆ ಈ ಬಗ್ಗೆ ದೂರು ನೀಡುತ್ತೀರಾ’ ಎಂದು ಕೇಳಿದಾಗ, ‘ನಾನು ಏಕೆ ಅಲ್ಲಿಗೆ ಹೋಗಿ ದೂರು ಕೊಡಲಿ. ಅವರೇ ನಮ್ಮ ಹತ್ತಿರ ಬರಬೇಕು’ ಎಂದು ಹೇಳಿದರು.

ಕುತೂಹಲ ಮೂಡಿಸಿದ ಬಿಜೆಪಿ ನಡೆ

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಮೌನವಾಗಿ ಅವಲೋಕಿಸುತ್ತಿರುವ ಬಿಜೆಪಿ, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಈ ಹಿಂದೆ ‘ಕೈ’ ಪಾಳಯದ ಅತೃಪ್ತರು ಬಂಡಾಯ ಎದ್ದಿದ್ದಾಗ ಕಮಲ ಪಡೆ ‘ಆಪರೇಷನ್‌ ಕಮಲ’ ನಡೆಸಲು ಮುಂದಾಗಿತ್ತು. ಆಗ ಫಲ ನೀಡಿರಲಿಲ್ಲ.

ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡಲು ಕನಿಷ್ಠ 12 ಶಾಸಕರಿಂದ ರಾಜೀನಾಮೆ ಕೊಡಿಸಬೇಕು. ಹೊಸ ಸರ್ಕಾರ ರಚನೆಗೆ 17 ಶಾಸಕರು ರಾಜೀನಾಮೆ ನೀಡಬೇಕು. ಒಂದೇ ಸಲ ಇಷ್ಟು ಮಂದಿಯನ್ನು ಸೆಳೆಯುವುದು ಈಗಿನ ಪರಿಸ್ಥಿತಿಯನ್ನು ಕಷ್ಟದ ಕೆಲಸ ಎಂಬುದು ಬಿಜೆಪಿ ನಾಯಕರ ಅಭಿಮತ. ಅತೃಪ್ತರ ಸಂಖ್ಯೆ ಹೆಚ್ಚುವ ವರೆಗೆ ಕಾದು ನೋಡುವುದು ಅವರ ಆಲೋಚನೆ.

* ನಾಲ್ಕು ದಿನ ನನ್ನನ್ನು ಸುಮ್ಮನೆ ಬಿಟ್ಟುಬಿಡಿ. ಕೆಲವೊಂದು ತೀರ್ಮಾನ ತೆಗೆದುಕೊಳ್ಳಬೇಕಿದೆ. ಯಾವಾಗ ಏನು ಮಾಡುತ್ತೇನೆ ಎಂದು ಆಗ ಹೇಳುವೆ

-ರಮೇಶ ಜಾರಕಿಹೊಳಿ, ಶಾಸಕ

* ರಾಮಲಿಂಗಾ ರೆಡ್ಡಿ ಹಾಗೂ ರಮೇಶ ಜಾರಕಿಹೊಳಿ ಅವರಿಗೆ ಪಕ್ಷದ ಬಗ್ಗೆ ಬೇಸರವಿಲ್ಲ. ಅವರ ಜತೆಗೆ ಮಾತನಾಡಿ ಮನವೊಲಿಸುತ್ತೇನೆ.

-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

* ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್‌ ಅವರ ಬಾಲಬಡುಕರಿಗಷ್ಟೇ ಸಚಿವ ಸ್ಥಾನ ನೀಡಲಾಗಿದೆ

-ಶಾಮನೂರು ಶಿವಶಂಕರಪ್ಪ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.