ADVERTISEMENT

ಬಡವಾದ ಭಾರತವನ್ನ ಅದಾನಿ, ಅಂಬಾನಿಗೆ ಅಡ ಇಡಲಾಗುತ್ತಿದೆ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 7:38 IST
Last Updated 1 ಅಕ್ಟೋಬರ್ 2021, 7:38 IST
ಮುಕೇಶ್‌ ಅಂಬಾನಿ ಮತ್ತು ಗೌತಮ್‌ ಅದಾನಿ ಅವರ ಸಾಂದರ್ಭಿಕ ಚಿತ್ರ
ಮುಕೇಶ್‌ ಅಂಬಾನಿ ಮತ್ತು ಗೌತಮ್‌ ಅದಾನಿ ಅವರ ಸಾಂದರ್ಭಿಕ ಚಿತ್ರ   

ಬೆಂಗಳೂರು: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌(ಆರ್‌ಐಎಲ್‌) ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ಭಾರತದ ಅತ್ಯಂತ ಸಿರಿವಂತ ವ್ಯಕ್ತಿಯಾಗಿ, ಉದ್ಯಮಿ ಗೌತಮ್‌ ಅದಾನಿ 2ನೇ ಸ್ಥಾನ ಪಡೆದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, 'ಬಡವಾದ ಭಾರತವನ್ನ ಅದಾನಿ, ಅಂಬಾನಿಗೆ ಅಡ ಇಡಲಾಗುತ್ತಿದೆ' ಎಂದು ದೂರಿದೆ.

'ಭಾರತ ಬಡವಾಗಿದೆ, ಮೋದಿ ಗೆಳೆಯರು ಸಿರಿವಂತರಾಗಿದ್ದಾರೆ. ಭಾರತದ ಆಸ್ತಿ ಮಾರಲಾಗುತ್ತಿದೆ, ಮೋದಿ ಗೆಳೆಯರ ಆಸ್ತಿ ಬೆಳೆಯುತ್ತಿದೆ. ಬಡವಾದ ಭಾರತವನ್ನ ಅದಾನಿ, ಅಂಬಾನಿಗೆ ಅಡ ಇಡಲಾಗುತ್ತಿದೆ' ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

'ಪ್ರಜಾವಾಣಿ'ಯ ಅಂಬಾನಿ ದೇಶದ ಸಿರಿವಂತ ವ್ಯಕ್ತಿ (ಅ.01) ವರದಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್‌, ಜನತೆ ಬಡವರಾಗಿರುವುದಷ್ಟೇ ಅಲ್ಲ, ಸರ್ಕಾರದ ಖಜಾನೆಯೂ ಖಾಲಿ, ಆದರೆ ಉದ್ಯಮಿಗಳು ಹೇಗೆ ಬೆಳೆದರು ಎಂದು ಜನತೆ ಯೋಚಿಸಿದರೆ ಮೋದಿಯವರ ಆಡಳಿತ ಅರ್ಥವಾಗಲಿದೆ ಎಂದು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದೆ.

ADVERTISEMENT

ಅದಾನಿ ಅವರು ಪ್ರತಿದಿನ 1 ಸಾವಿರ ಕೋಟಿ ಆದಾಯ ಗಳಿಸುತ್ತಿದ್ದಾರೆ ಎಂದು ಹುರೂನ್‌ ಇಂಡಿಯಾ ಸಿದ್ಧಪಡಿಸುವ 'ಐಐಎಫ್‌ಎಲ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್‌ ಲಿಸ್ಟ್‌ - 2021' ಬಿಡುಗಡೆ ಮಾಡಿದ ವರದಿಯಲ್ಲಿ ಮಾಹಿತಿ ನೀಡಿದೆ.

'10 ವರ್ಷಗಳ ಹಿಂದೆ ಈ ಪಟ್ಟಿಯಲ್ಲಿ ಸ್ಥಾನ ಪಡೆದವರ ಸಂಖ್ಯೆ 100ಕ್ಕಿಂತ ಕಡಿಮೆ ಇತ್ತು. ಈಗ ಅದು ಸಾವಿರಕ್ಕೆ ತಲುಪಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ 5 ವರ್ಷಗಳಲ್ಲಿ 2 ಸಾವಿರ ವ್ಯಕ್ತಿಗಳ ಹೆಸರು ಈ ಪಟ್ಟಿ ಸೇರಲಿವೆ' ಎಂದು ಹುರೂನ್‌ ಇಂಡಿಯಾ ಸಂಸ್ಥೆಯ ಮುಖ್ಯ ಸಂಶೋಧಕ ಅನಸ್‌ ರೆಹ್ಮಾನ್‌ ಜುನೈದ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.