ADVERTISEMENT

ಮೇಕೆದಾಟು ಪಾದಯಾತ್ರೆ | ಕಾಂಗ್ರೆಸ್‌ಗೆ ತಪ್ಪಿನ ಅರಿವು: ಸಚಿವ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 11:27 IST
Last Updated 13 ಜನವರಿ 2022, 11:27 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ಮೇಕೆದಾಟು ಯೋಜನೆಯ ವಿಚಾರವಾಗಿ ಪಾದಯಾತ್ರೆ ನಡೆಸುವ ಅಗತ್ಯವೇ ಇರಲಿಲ್ಲ. ಕೊನೆಗಾದರೂ ಕಾಂಗ್ರೆಸ್ಸಿಗೆ ತನ್ನ ತಪ್ಪಿನ ಅರಿವಾಗಿ ಪಾದಯಾತ್ರೆಯನ್ನು ನಿಲ್ಲಿಸಿರುವುದು ಒಳ್ಳೆಯದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ಇಲ್ಲಿ ಮಾತನಾಡಿದ ಅವರು, `ಯೋಜನೆಯನ್ನು ಯಾರೊಬ್ಬರೂ ವಿರೋಧಿಸಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರು ಸರಕಾರದೊಂದಿಗೆ ಸಹಕರಿಸಬೇಕಿತ್ತು. ಯೋಜನೆಯನ್ನು ಬೇಡವೆಂದರೆ ತಾನೇ ಅದರ ವಿರುದ್ಧ ಹೋರಾಟದ ಪ್ರಶ್ನೆ ಬರುವುದು?’ ಎಂದು ಅವರು ಹೇಳಿದರು.

`ಡಿ.ಕೆ.ಶಿವಕುಮಾರ್ ಅವರಿಗೆ ಯೋಜನೆಯ ಬಗ್ಗೆ ಯಾವ ಕಳಕಳಿಯೂ ಇಲ್ಲ ತಮ್ಮ ಪಕ್ಷವನ್ನು ಹೈಜಾಕ್ ಮಾಡಿ, ಸಿದ್ದರಾಮಯ್ಯನವರನ್ನು ಅಂಚಿಗೆ ಸರಿಸುವ ಅಜೆಂಡಾ ಅವರದಾಗಿತ್ತು. ಇದಕ್ಕಾಗಿ ಅವರು ಪಾದಯಾತ್ರೆಯ ನೆವ ಹುಡುಕಿಕೊಂಡಿದ್ದರು ಅಷ್ಟೆ’ ಎಂದು ಅವರು ಟೀಕಿಸಿದರು.

ADVERTISEMENT

`ಕೊರೋನಾ ಮತ್ತು ಓಮಿಕ್ರಾನ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಅನುಮತಿಯನ್ನೇ ನೀಡಿರಲಿಲ್ಲ. ಆದರೂ ಅವರು ಭಂಡತನಕ್ಕೆ ಇಳಿದಿದ್ದರು. ಸರಕಾರ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿತ್ತು. ಜತೆಗೆ ಹೈಕೋರ್ಟ್ ಕೂಡ ಇತ್ತ ಗಮನ ಹರಿಸಿ, ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿತು. ಇದರಿಂದ ಮುಖಭಂಗಕ್ಕೊಳಗಾದ ಆ ಪಕ್ಷಕ್ಕೆ ಪಾದಯಾತ್ರೆ ನಿಲ್ಲಿಸದೆ ಬೇರೆ ಗತಿ ಇರಲಿಲ್ಲ’ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.