ADVERTISEMENT

ವನ್ಯಜೀವಿ- ಮಾನವ ಸಂಘರ್ಷದ ನಿರ್ಲಕ್ಷ್ಯವೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2025, 14:21 IST
Last Updated 26 ಜೂನ್ 2025, 14:21 IST
<div class="paragraphs"><p>ಸುನೀಲ್ ಕುಮಾರ್</p></div>

ಸುನೀಲ್ ಕುಮಾರ್

   

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ವನ್ಯಜೀವಿ- ಮಾನವ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದಲೇ ಇಂದು ಒಮ್ಮೆಲೇ ಐದು ಹುಲಿಗಳು ಸತ್ತಿವೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂನಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಅಸಹಜವಾಗಿ ಮೃತಪಟ್ಟಿರುವ ಘಟನೆಯ ಬಗ್ಗೆ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಐದು ಹುಲಿಗಳು ಅಸಹಜ ಮರಣವನ್ನಪ್ಪಿರುವುದು ವಿಷಾದನೀಯ. ವನ್ಯಜೀವಿ ಹಾಗೂ ಮಾನವ ಸಂಘರ್ಷವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದೇ ಈ ಸಮಸ್ಯೆಯ ಮೂಲ. ಹುಲಿಗಳಿಗೆ ವಿಷಪ್ರಾಶನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ಮಾಡುವುದರ ಜತೆಗೆ ವನ್ಯಜೀವಿ- ಮಾನವ ಸಂಘರ್ಷಕ್ಕೆ ಶಾಶ್ವತ ಪರಿಣಾಮ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಪಶ್ಚಿಮ ಘಟ್ಟ ಸೇರಿದಂತೆ ರಾಜ್ಯಾದ್ಯಂತ ಈಗ ಈ ಸಮಸ್ಯೆ ಉಲ್ಬಣವಾಗಿದ್ದು, ಇದೊಂದು ಆದ್ಯತೆಯ ವಿಚಾರ ಎನ್ನುವುದನ್ನು ಸರ್ಕಾರ ಮರೆಯಬಾರದು.

ವಿಷಪ್ರಾಶನದ ಶಂಕೆ

ಹುಲಿಗಳ ಮೃತದೇಹಗಳು ಪತ್ತೆಯಾಗಿದ್ದು ಮೇಲ್ನೋಟಕ್ಕೆ ವಿಷಪ್ರಾಶನದಿಂದ ಹುಲಿಗಳು ಮೃತಪಟ್ಟಿ ರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಹುಲಿಗಳ ಅಸಹಜ ಸಾವಿನ ಪ್ರಕರಣದ ತನಿಖೆಗೆ ಪಿಸಿಸಿಎಫ್ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಬೇಕು. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಅಥವಾ ವಿದ್ಯುತ್ ಸ್ಪರ್ಶ, ವಿಷಪ್ರಾಶನದಿಂದ ಮೃತಪಟ್ಟಿದ್ದರೆ ಅದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಹಾಗೂ ಮೂರು ದಿನಗಳ ಒಳಗೆ ತನಿಖಾ ವರದಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಆದೇಶ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.