ADVERTISEMENT

ರಾಹುಲ್‌ ಜತೆ ಹರಿ‍‍ಪ್ರಸಾದ್‌ ಚರ್ಚೆ: ಇಂದು ದೆಹಲಿಗೆ ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 23:30 IST
Last Updated 24 ನವೆಂಬರ್ 2025, 23:30 IST
ರಾಹುಲ್‌ ಗಾಂಧಿ– ಮಲ್ಲಿಕಾರ್ಜುನ ಖರ್ಗೆ
ರಾಹುಲ್‌ ಗಾಂಧಿ– ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ/ ಬೆಂಗಳೂರು: ಆಡಳಿತರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲ ತಾರಕಕ್ಕೇರಿರುವ ನಡುವೆ, ರಾಹುಲ್‌ ಗಾಂಧಿ ಅವರನ್ನು ದೆಹಲಿಯಲ್ಲಿ ಸೋಮವಾರ ಭೇಟಿ ಮಾಡಿದ ಬಿ.ಕೆ. ಹರಿ‍ಪ್ರಸಾದ್‌ ಅವರು 10 ನಿಮಿಷ ಚರ್ಚೆ ನಡೆಸಿದ್ದಾರೆ.

ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಹರಿಪ್ರಸಾದ್‌ ಅವರು ಹರಿಯಾಣ ರಾಜ್ಯದ ಎಐಸಿಸಿ ಉಸ್ತುವಾರಿಯಾಗಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣದ ನಡುವೆ ನಾಯಕತ್ವಕ್ಕಾಗಿನ ಕಚ್ಚಾಟ ತೀವ್ರವಾಗಿದ್ದು, ಶಾಸಕರ ಬಲ ಕ್ರೋಡೀಕರಣದ ಯತ್ನಗಳು ನಡೆಯುತ್ತಿವೆ. ಈ ಬೆಳವಣಿಗೆಗಳ ಮಧ್ಯೆಯೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಅವರನ್ನು ಹರಿಪ್ರಸಾದ್ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮೂರು ದಿನಗಳಿಂದ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ (ನ. 25) ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಸಚಿವರು, ಶಾಸಕರ ಜೊತೆ ಮಾತುಕತೆ ನಡೆಸಿರುವ ಖರ್ಗೆ, ಈ ವಿಚಾರವನ್ನು ರಾಹುಲ್‌ ಗಾಂಧಿ ಜೊತೆ ಹಂಚಿಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರನ್ನು ಇದೇ ವಾರಾಂತ್ಯದಲ್ಲಿ ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.