
ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿಯೇ 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನವೆಂಬರ್ ಕ್ರಾಂತಿ ಎನ್ನುವುದೇ ಸುಳ್ಳು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ನವೆಂಬರ್‌ಗೆ ಕ್ರಾಂತಿಯಾಗುತ್ತದೆ. ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವುದೆಲ್ಲ ಮಾಧ್ಯಮಗಳಿಗೆ ಬಿಜೆಪಿ ನೀಡುತ್ತಿರುವ ತಪ್ಪು ಮಾಹಿತಿ’ ಎಂದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಸಂಪುಟ ಪುನರ್‌ರಚನೆ ಕುರಿತು ವರಿಷ್ಠರು ನಿರ್ಧಾರ ಮಾಡುತ್ತಾರೆ. ನಾವು ಏನೇ ಹೇಳಿದರೂ ಅಂತಿಮ ತೀರ್ಮಾನ ಅವರೇ ಮಾಡಬೇಕು. ಯಾವ ಕ್ರಾಂತಿಯೂ ಇಲ್ಲ’ ಎಂದು ಹೇಳಿದರು.
‘ದೆಹಲಿಗೆ ಹೋಗಿದ್ದು ಸಾಮಾನ್ಯ ಭೇಟಿ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ್ದೆ. ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಮಾಡಿಲ್ಲ. ಬೇರೆ ವಿಷಯಗಳ ಚರ್ಚೆಯನ್ನೂ ಮಾಡಿಲ್ಲ. ಅವಕಾಶ ಬಂದಾಗ ಚರ್ಚೆ ಮಾಡುತ್ತೇನೆ’ ಎಂದರು.
ಶಾಸಕ ಕೆ.ಎನ್.ರಾಜಣ್ಣ ಅವರ ‘ಕಾಂಗ್ರೆಸ್ ವೈಟ್‌ವಾಶ್’ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ‘ಇಂತಹ ವಿಷಯಗಳಲ್ಲಿ ಅವರೇ ಸ್ಪಷ್ಟನೆ ಕೊಡಬೇಕು. ನಾನು ಹೇಳಲು ಆಗದು. ಇಲ್ಲವೇ, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಮಾತನಾಡಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕುರಿತು ಶಾಸಕ ರಾಜು ಕಾಗೆ ಅವರು ರಾಷ್ಟ್ರಪತಿಗೆ ಬರೆದ ಪತ್ರದ ಬಗ್ಗೆ ಮಾಹಿತಿ ಇಲ್ಲ. ನಾವು ಎಂದಿಗೂ ಅಖಂಡ ಕರ್ನಾಟಕದ ಪರವಾಗಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.