ADVERTISEMENT

ಪಂಚ ರಾಜ್ಯ ಚುನಾವಣೆ: ‘ಕೈ’ ಹಿರಿಯ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 16:06 IST
Last Updated 8 ಜನವರಿ 2026, 16:06 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ನವದೆಹಲಿ: ಈ ವರ್ಷ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ಮೇಲ್ವಿಚಾರಣೆಗೆ ಹಿರಿಯ ವೀಕ್ಷಕರನ್ನು ಕಾಂಗ್ರೆಸ್‌ ಪಕ್ಷ ನೇಮಿಸಿದೆ. 

ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸ್ಕ್ರೀನಿಂಗ್‌ ಕಮಿಟಿಗಳನ್ನು ರಚಿಸಿದ ಕೆಲವು ದಿನಗಳ ಬಳಿಕ ಈ ನೇಮಕಾತಿ ಹೊರಬಿದ್ದಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಸ್ಸಾಂಗೆ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರನ್ನು ಕೇರಳಕ್ಕೆ ನಿಯೋಜಿಸಲಾಗಿದೆ. ಪಂಚ ರಾಜ್ಯಗಳಲ್ಲಿ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಂಭವ ಇದೆ. 

ADVERTISEMENT

ವಯನಾಡ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಅಸ್ಸಾಂ ಸ್ಕ್ರೀನಿಂಗ್ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ಬೆನ್ನಲ್ಲೇ ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, ಡಿ.ಕೆ. ಶಿವಕುಮಾರ್, ಜಾರ್ಖಂಡ್‌ನ ಮಾಜಿ ಶಾಸಕ ಬಂಧು ಟಿರ್ಕಿ ಅವರಿಗೆ ಪ್ರಮುಖ ಹೊಣೆ ವಹಿಸಲಾಗಿದೆ. ಅಸ್ಸಾಂನಲ್ಲಿ ಹತ್ತು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಓಟಕ್ಕೆ ಕಡಿವಾಣ ಹಾಕಲು ಅಸ್ಸಾಂನತ್ತ ಕಾಂಗ್ರೆಸ್ ನಾಯಕತ್ವವು ಗಮನಹರಿಸುತ್ತಿದೆ. 

ತಮಿಳುನಾಡಿಗೆ ಹಿರಿಯ ನಾಯಕ ಮುಕುಲ್‌ ವಾಸ್ನಿಕ್, ತೆಲಂಗಾಣದ ಸಚಿವ ಉತ್ತಮ್ ಕುಮಾರ್ ರೆಡ್ಡಿ ಮತ್ತು ಹಿರಿಯ ನಾಯಕ ಖಾಜಿ ಮೊಹಮ್ಮದ್ ನಿಜಾಮುದ್ದೀನ್ ಅವರನ್ನು ನಿಯೋಜಿಸಲಾಗಿದೆ. ಅವರು ಪುದುಚೆರಿಗೆ ಹಿರಿಯ ವೀಕ್ಷಕರಾಗಿಯೂ ಇರುತ್ತಾರೆ.

ಹರಿಯಾಣ ರಾಜ್ಯ ಉಸ್ತುವಾರಿಯಾಗಿರುವ ವಿಧಾನ ಪ‍ರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಪಶ್ಚಿಮ ಬಂಗಾಳದ ಸ್ಕ್ರೀನಿಂಗ್ ಸಮಿತಿಯ ನೇತೃತ್ವ ವಹಿಸಿದ್ದರೆ, ರಾಜ್ಯಸಭಾ ಸದಸ್ಯರಾದ ಸಯ್ಯದ್‌ ನಾಸೀರ್ ಹುಸೇನ್ ಕೇರಳದ ಹಾಗೂ ಜಿ.ಸಿ.ಚಂದ್ರಶೇಖರ್ ಅವರು ತಮಿಳುನಾಡು ಮತ್ತು ಪುದುಚೆರಿಯ ಸಮಿತಿಯ ಸದಸ್ಯರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.