ADVERTISEMENT

ಸಿಂಧನೂರು: ಲಾಕ್‌ ಡೌನ್‌ ಪರಿಣಾಮ, ಕೆಲಸಕ್ಕೆ ಹೋದಾಕೆ ಶವವಾಗಿ ಬಂದಳು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 11:14 IST
Last Updated 7 ಏಪ್ರಿಲ್ 2020, 11:14 IST
ಗಂಗಮ್ಮ (ಪೂಜಾ)
ಗಂಗಮ್ಮ (ಪೂಜಾ)   

ಸಿಂಧನೂರು: ಹೊಟ್ಟೆಪಾಡಿಗೆಂದು ಬೆಂಗಳೂರಿಗೆ ಕಟ್ಟಡ ಕಾರ್ಮಿಕಳಾಗಿ ಹೋಗಿದ್ದ ಸಿಂಧನೂರು ನಗರದ ವೆಂಕಟರಾವ್ ಕಾಲೊನಿ ನಿವಾಸಿ ಗಂಗಮ್ಮ (ಪೂಜಾ) ಅವರಿಗೆ ದುಡಿದ ಹಣವನ್ನು ಅಪಾರ್ಟ್‍ಮೆಂಟ್ ಮಾಲೀಕರು ಕೊಡದೆ ವಂಚಿಸಿದ ಕಾರಣದಿಂದ ಮೂರ್ನಾಲ್ಕು ದಿನ ಹೊಟ್ಟೆಗೆ ಅನ್ನವಿಲ್ಲದೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗಂಗಮ್ಮ ಅವರು ತಾಲ್ಲೂಕಿನ ಹಲವರೊಂದಿಗೆ ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿಗೆ ತೆರಳಿ ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‍ಮೆಂಟ್‌ನ ನಿರ್ಮಾಣ ಕೆಲಸ ಮಾಡುತ್ತಿದ್ದಳು. ಆದರೆ, ಮಾರ್ಚ್ 24ಕ್ಕೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಯಿತು.

ಇದರಿಂದ ಮಾಲೀಕರು ಅಪಾರ್ಟ್‍ಮೆಂಟ್ ಕೆಲಸವನ್ನು ಸ್ಥಗಿತಗೊಳಿಸಿದ್ದಲ್ಲದೆ, ಆಕೆಗೆ ಕೊಡಬೇಕಾದ ₹10 ಸಾವಿರ ಹಣವನ್ನು ಕೊಡದೆ ವಂಚಿಸಿದ್ದರು.

ADVERTISEMENT

ಅಲ್ಲಿಯೇ ಕೆಲಸ ಮಾಡುತ್ತಿದ್ದ ಲಿಂಗಸುಗೂರು, ಸಿಂಧನೂರು, ಕುಷ್ಟಗಿ ತಾಲ್ಲೂಕಿನ 50 ಜನರು ಒಂದೆಡೆ ಸೇರಿ ಮಸ್ಕಿಯ ಟ್ರ್ಯಾಕ್ಟರ್ ಬಾಡಿಗೆ ಪಡೆದು ಬೆಂಗಳೂರಿನಿಂದ ಬರುತ್ತಿದ್ದರು.

ಮಾ.31ಕ್ಕೆ ಕೂಲಿಕಾರರನ್ನು ತುಂಬಿಕೊಂಡ ಟ್ರ್ಯಾಕ್ಟರ್ ಬಳ್ಳಾರಿಗೆ ಬಂದಿದ್ದು, ಅಲ್ಲಿಯ ಪೊಲೀಸರು ತಡೆದು ಬಿಸಿಎಂ ಹಾಸ್ಟೆಲ್‍ನ ಕ್ವಾರೆಂಟೈನ್ ವಾರ್ಡ್‍ನಲ್ಲಿ ಇರಿಸಿದ್ದಾರೆ. ಈ ಸಂದರ್ಭದಲ್ಲಿ ಗಂಗಮ್ಮಳಿಗೆ ಮೂರ್ನಾಲ್ಕು ದಿನದಿಂದ ಸರಿಯಾಗಿ ಆಹಾರವಿಲ್ಲದ ಕಾರಣ ಶಕ್ತಿಹೀನಳಾಗಿದ್ದಾಳೆ. ಅಲ್ಲದೆ ಅದೇ ಸಮಯದಲ್ಲಿ ವಾಂತಿ ಮತ್ತು ಹೊಟ್ಟೆನೋವು ಪ್ರಾರಂಭವಾಗಿದೆ.

ಗಂಗಮ್ಮ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಯ ವೈದ್ಯರು ಸಹ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದ ಆಕೆಯ ಪತಿ, ಪತ್ನಿ ಏ5 ರಂದು ಕೊನೆಯುಸಿರೆಳೆದಿದ್ದಾಳೆ ಎಂದಿದ್ದಾರೆ. ಕೊರೊನಾ ತಪಾಸಣೆ ನಡೆಸಿದಾಗ ನೆಗೆಟಿವ್ ಬಂದಿದ್ದರೂ ಸಹ ಚಿಕಿತ್ಸೆ ನೀಡದ ಕಾರಣಕ್ಕಾಗಿ ಪತ್ನಿಯನ್ನು ಕಳೆದುಕೊಳ್ಳಬೇಕಾಯಿತು’ ಎಂದು ಪತಿ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.