ADVERTISEMENT

ಕೋವಿಡ್: ದುಬಾರಿಯಾದ ಮಾಸ್ಕ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:24 IST
Last Updated 19 ಫೆಬ್ರುವರಿ 2020, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ವೈರಸ್‌ ಭೀತಿಯನ್ನೇ ಲಾಭದ ಮೂಲವ‌ನ್ನಾಗಿಸಿಕೊಂಡಿರುವ ಕೆಲ ಔಷಧಿ ಮಳಿಗೆಗಳು, ₹5 ಮಾಸ್ಕ್‌ಗೆ
₹25ರವರೆಗೂ ವಸೂಲಿ ಮಾಡುತ್ತಿವೆ.

ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್‌ ಸೋಂಕು ಈಗಾಗಲೇ ಹಲವು ದೇಶಗಳಿಗೆ ಹರಡಿದೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ಗಳನ್ನು ಧರಿಸುವಂತೆ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಲಹೆ ಮಾಡುತ್ತಿದ್ದಾರೆ. ಸೋಂಕಿನಿಂದ ರಕ್ಷಿಸಿಕೊಳ್ಳುವ ಸಂಬಂಧ ಮಾಸ್ಕ್‌ ಖರೀದಿಸುವವರ ಸಂಖ್ಯೆ ಏಕಾಏಕಿ ಏರಿಕೆಯಾಗಿದ್ದು, ಬೇಡಿಕೆ ಹಾಗೂ ಪೂರೈಕೆ ನಡುವೆ ಭಾರೀ ವ್ಯತ್ಯಯವಾಗಿದೆ. ಇದರಿಂದಾಗಿ ಮಾರಾಟಗಾರರು ಪ್ರತಿ ಮಾಸ್ಕ್‌ನ ಮೂಲ ಬೆಲೆಯ ಮೇಲೆ ನಾಲ್ಕರಿಂದ ಐದು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ಮಾಸ್ಕ್‌ಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಅಲ್ಲಿಯೇ ಈಗ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇನ್ನೊಂದೆಡೆ, ಈ ದೇಶಕ್ಕೆ ಬರುವ ಕಚ್ಚಾ ಪದಾರ್ಥಗಳ ಆಮದು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ‘ಉನ್ನತ ಗುಣಮಟ್ಟದ ಮಾಸ್ಕ್‌ಗಳ ದರ ₹ 175ರಿಂದ ₹600‌ವರೆಗೂ ಇದ್ದು, ಇವುಗಳ ದರದಲ್ಲಿ ಕೊಂಚ ಏರಿಕೆಯಾಗಿದೆ. ಆದರೆ, ಈ ಮಾಸ್ಕ್‌ಗಳಿಗೆ ಅಷ್ಟಾಗಿ ಬೇಡಿಕೆಯಿಲ್ಲ’ ಎನ್ನುತ್ತಾರೆ ಔಷಧಿ ಅಂಗಡಿಗಳ ಮಾಲೀಕರು.

ADVERTISEMENT

‘ವಾರದಿಂದ ಮಾಸ್ಕ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಬೆಲೆಯಲ್ಲಿಯೂ ಏರಿಕೆಯಾಗುತ್ತಿದೆ. ದೆಹಲಿ, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದ ಬೇಡಿಕೆ ಹೆಚ್ಚುತ್ತಿದ್ದು, ಲಕ್ಷಾಂತರ ಮಾಸ್ಕ್‌ಗಳನ್ನು ಮುಂಗಡವಾಗಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಆದರೆ, ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯಾಗುತ್ತಿಲ್ಲ. ಆದ ಕಾರಣ ಇಲ್ಲಿನ ಬೇಡಿಕೆ ಪೂರೈಸಲು ನಮಗೆ ಸಾಧ್ಯವಾಗುತ್ತಿಲ್ಲ’ ಎಂದು ಮಾಸ್ಕ್‌ ವಿತರಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.