ADVERTISEMENT

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ: ಜೂನ್‌ನಲ್ಲಿ 10 ಸಾವಿರ, ಜುಲೈಗೆ ಲಕ್ಷ !

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 9:40 IST
Last Updated 28 ಜುಲೈ 2020, 9:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಒಂದು ತಿಂಗಳ ಅಂತರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರದಿಂದ ಒಂದು ಲಕ್ಷಕ್ಕೆ ಏರಿದೆ. 5,324 ಮಂದಿಗೆ ಸೋಮವಾರ ಸೋಂಕು ದೃಢಪಡುವ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,01,465ಕ್ಕೆ ಏರಿದೆ.

ಕೋವಿಡ್‌ ‍ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ಹಾಗೂ ತಮಿಳುನಾಡಿನ ನಂತರದ ಸ್ಥಾನದಲ್ಲಿ ರಾಜ್ಯ ಇದೆ. ಬೆಂಗಳೂರು ನಗರದಲ್ಲಿ 1,470 ಮಂದಿಗೆ ಸೋಮವಾರ ಸೋಂಕು ಕಾಣಿಸಿಕೊಂಡಿದೆ. ಬಳ್ಳಾರಿಯಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಒಂದೇ ದಿನ 840 ಮಂದಿಯಲ್ಲಿ ಕಾಯಿಲೆ ಪತ್ತೆಯಾಗಿದೆ. ಮೈಸೂರಿನಲ್ಲಿಯೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 296 ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿದೆ.

ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿ ದಾಟಿದ್ದು, 225 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 199 ಮಂದಿಗೆ ಕೋವಿಡ್–19 ದೃಢಪಟ್ಟಿದೆ.

1,847 ಮಂದಿ ಗುಣಮುಖ: ಗುಣಮುಖರಾದವರ ಸಂಖ್ಯೆಯೂ ಏರುತ್ತಿದೆ. ಜುಲೈ 27ರಂದು 1,847 ಮಂದಿ ಗುಣಮುಖರಾಗುವ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮುಕ್ತರಾದವರ ಸಂಖ್ಯೆ 37,685ಕ್ಕೆ ಏರಿದೆ.

ಸಾವಿನ ಸಂಖ್ಯೆ 2 ಸಾವಿರ ಸಮೀಪಕ್ಕೆ: ಕೋವಿಡ್‌–19ನಿಂದ 75 ಜನರು ಸಾವಿಗೀಡಾಗುವ ಮೂಲಕ ರಾಜ್ಯದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 1,953ಕ್ಕೆ ತಲುಪಿದೆ.

ಬೆಂಗಳೂರು ನಗರದಲ್ಲಿ 26, ದಕ್ಷಿಣ ಕನ್ನಡ 9, ಧಾರವಾಡದಲ್ಲಿ 8, ಬೆಳಗಾವಿಯಲ್ಲಿ 6 ಜನರು ಮೃತಪಟ್ಟಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 598 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.