ADVERTISEMENT

Covid-19 Karnataka Update: ರಾಜ್ಯದಲ್ಲಿ 6,150 ಕೋವಿಡ್‌ ಪ್ರಕರಣಗಳು

ಬೆಂಗಳೂರಿನಲ್ಲಿ 4,266 ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 21:15 IST
Last Updated 6 ಏಪ್ರಿಲ್ 2021, 21:15 IST
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿಯಿಂದ ಮಾಹಿತಿ ಪಡೆಯುತ್ತಿರುವ ಪ್ರಯಾಣಿಕ–ಸಾಂದರ್ಭಿಕ ಚಿತ್ರ
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿಯಿಂದ ಮಾಹಿತಿ ಪಡೆಯುತ್ತಿರುವ ಪ್ರಯಾಣಿಕ–ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದು, 24 ಗಂಟೆಗಳ ಅವಧಿಯಲ್ಲಿ 6,150 ಹೊಸ ಪ್ರಕರಣಗಳು ವರದಿಯಾಗಿವೆ.

ಸುಮಾರು ಐದೂವರೆ ತಿಂಗಳ ಹಿಂದೆ (ಅಕ್ಟೋಬರ್‌ನಲ್ಲಿ) ಈ ರೀತಿ ಒಂದೇ ದಿನದಲ್ಲಿ ಆರು ಸಾವಿರದ ಆಸು–ಪಾಸು ಪ್ರಕರಣಗಳು ವರದಿಯಾಗುತ್ತಿದ್ದವು. ಈ ವರ್ಷದಲ್ಲಿ 24 ತಾಸುಗಳ ಅವಧಿಯಲ್ಲಿ ಗರಿಷ್ಠ ಸಾವು (39) ಸಂಭವಿಸಿರುವುದೂ ಇದೇ ಮೊದಲು.

ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಪರೀಕ್ಷೆಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗದಿದ್ದರೂ ಹೊಸ ಪ್ರಕರಣಗಳು
871ರಷ್ಟು ಹೆಚ್ಚಾಗಿದೆ.

ADVERTISEMENT

ತೀವ್ರ ನಿಗಾ ಘಟಕಕ್ಕೆ ದಾಖಲಾಗುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಿದ್ದು, ಸದ್ಯ 351 ಮಂದಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿಯಲ್ಲಿ ಸೋಂಕು ಹರಡುತ್ತಿದ್ದು, ಹೊಸದಾಗಿ 4,266 ಮಂದಿಗೆ ಕೋವಿಡ್ ದೃಢಪಟ್ಟಿದೆ. 26 ಜನ ಸಾವಿಗೀಡಾಗುವ ಮೂಲಕ ಬೆಂಗಳೂರಿನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 4,693ಕ್ಕೆ ಏರಿದೆ.

1.02 ಲಕ್ಷ ಪರೀಕ್ಷೆ: ರಾಜ್ಯದಲ್ಲಿ ಏ.6ರಂದು 1.02 ಲಕ್ಷ ಮಂದಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇರಲ್ಲಿ 9,168 ಮಂದಿಗೆ ಆ್ಯಂಟಿಜೆನ್‌ ಪರೀಕ್ಷೆ ಮಾಡಲಾಗಿದ್ದರೆ, 92,853 ಮಂದಿ ಆರ್‌ಟಿ ಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದಾರೆ.

49 ಸಾವಿರ ಲಸಿಕೆ: 44ರಿಂದ 59 ವರ್ಷದೊಳಗಿನ 27,136 ಮಂದಿಗೆ, 60 ವರ್ಷ ಮೇಲ್ಪಟ್ಟ 19,280 ಮಂದಿಗೆ ಮಂಗಳವಾರ ಲಸಿಕೆ ಹಾಕಲಾಗಿದೆ. ಎರಡನೇ ಡೋಸ್‌ ಪಡೆದವರ ಸಂಖ್ಯೆಯೂ ಸೇರಿದಂತೆ ಒಟ್ಟಾರೆ 49,646 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಈವರೆಗೆ 48 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.