ADVERTISEMENT

ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿ ಬೇಕು: ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2023, 9:37 IST
Last Updated 19 ಜನವರಿ 2023, 9:37 IST
ಸುನಿಲ್‌ ಜೋಶಿ
ಸುನಿಲ್‌ ಜೋಶಿ    

ಬೆಂಗಳೂರು: ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿಯ ಅಗತ್ಯವಿರುವುದಾಗಿ ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಪ್ರತಿಪಾದಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಐಟಿ ಕ್ಷೇತ್ರ, ಉನ್ನತ ಶಿಕ್ಷಣ, ಅಮೆರಿಕ ವಿಶ್ವವಿದ್ಯಾಲಯಗಳಿಗೆ ದಾಖಲಾಗುವ ಎಲ್ಲಾ ವಿದ್ಯಾರ್ಥಿಗಳ ಪ್ರಸ್ತುತ ಪರಿಸ್ಥಿತಿ ಮತ್ತು ಅಗತ್ಯಗಳನ್ನು ಗಮನಿಸಿದರೆ ರಾಜ್ಯದ ನಾಗರಿಕರಿಗೆ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿಯ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಸವರಾಜ ಬೊಮ್ಮಾಯಿ ಅವರಲ್ಲಿ ನಾನು ವಿನಂತಿ ಮಾಡುತ್ತೇನೆ’ ಎಂದು ಜೋಶಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ವಿದೇಶಗಳಲ್ಲಿ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನೆಲೆಸುವ ತನ್ನ ನಾಗರಿಕರ ಹಿತಾಸಕ್ತಿ ರಕ್ಷಣೆಗಾಗಿ ಆಯಾ ದೇಶಗಳು, ವಿಶ್ವದ ವಿವಿಧ ದೇಶಗಳಲ್ಲಿ ತಮ್ಮ ರಾಯಭಾರ ಕಚೇರಿಯನ್ನು ಹೊಂದಿರುತ್ತವೆ. ಇದರ ಜತೆಗೆ, ವಿದೇಶಿಯರಿಗೆ ವೀಸಾಗಳನ್ನು ನೀಡುವ ಕಾರ್ಯವನ್ನೂ ಈ ರಾಯಭಾರ ಕಚೇರಿಗಳು ಮಾಡುತ್ತವೆ. ಸದ್ಯ ಅಮೆರಿಕದ ವೀಸಾ ಪಡೆಯಲು ಕರ್ನಾಟಕದ ಮಂದಿಗೆ ಚೆನ್ನೈನ ರಾಯಭಾರ ಕಚೇರಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಬೆಂಗಳೂರಿನಲ್ಲೂ ಅಮೆರಿಕ ರಾಯಭಾರ ಕಚೇರಿ ಬೇಕಿದೆ ಎಂದು ಜೋಶಿ ಪ್ರತಿಪಾದಿಸಿದ್ದಾರೆ.

ADVERTISEMENT

ಆದರೆ, ದೇಶವೊಂದರ ನಿರ್ದಿಷ್ಟ ನಗರದಲ್ಲಿ ರಾಯಭಾರ ಕಚೇರಿ ತೆರೆಯುವ ನಿರ್ಧಾರ ಕೈಗೊಳ್ಳುವುದು ಅಮೆರಿಕದ ವಿದೇಶಾಂಗ ಕಚೇರಿ ಮಾತ್ರ.

ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿ ಬೇಕೆಂಬ ಕೂಗಿನ ಬಗ್ಗೆ ಕಳೆದ ಆಗಸ್ಟ್‌ನಲ್ಲಿ ಪ್ರತಿಕ್ರಿಯಿಸಿದ್ದ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್‌, ಯಾವ ನಗರದಲ್ಲಿ ರಾಯಭಾರ ಕಚೇರಿ ತೆರೆಯಬೇಕು ಎಂಬುದನ್ನು ನಿರ್ಧಾರ ಮಾಡುವುದು ಅಮೆರಿಕದ ವಿದೇಶಾಂಗ ಇಲಾಖೆ. ನಾವು ಮನವಿ ಮಾತ್ರ ಮಾಡಬಹುದು. ರಾಯಭಾರ ಕಚೇರಿಯ ಅಗತ್ಯವನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ಹೇಳಿದ್ದರು. ‌

ಟ್ವೀಟ್‌ ಮಾಡಿ ಗದಕ್ಕೆ ವೋಲ್ವೊ ಬೇಕು ಎಂದಿದ್ದ ಜೋಶಿ

ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದು ಸುನೀಲ್‌ ಜೋಶಿ ಕೆಲ ದಿನಗಳ ಹಿಂದೆ ಟ್ವೀಟ್‌ ಮಾಡಿದ್ದರು. ಜೋಶಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಸಾರಿಗೆ ಸಚಿವ ಶ್ರೀರಾಮುಲು ಕೂಡಲೇ ಬಸ್‌ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.