ಅರುಣ್ ಕುಮಾರ್ ಪುತ್ತಿಲ
ಮಂಗಳೂರು: ‘ಜಿಲ್ಲೆಯಲ್ಲಿರುವ ಕೋಮುವಾದಿ ಸಂಘಟನೆಗಳ ಮುಖಂಡರ ಪಟ್ಟಿ ತಯಾರಿಸಿ, ಅವರ ಚಲನವಲನದ ಮೇಲೆ ನಿಗಾ ಇಡುವ ಕಾರ್ಯವನ್ನು ಆರಂಭಿಸಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಅರುಣ್ ಪುತ್ತಿಲ, ಸೌಜನ್ಯಾ ಪರ ಹೋರಾಟ ನಡೆಸುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿ, ವಿಶ್ವ ಹಿಂದೂ ಪರಿಷತ್ ಮುಖಂಡ ಭರತ್ ಕುಮ್ಡೇಲು, ಹಕೀಂ ಕೂರ್ನಡ್ಕ, ಕೆ.ಅಜೀಜ್, ಅಬ್ದುಲ್ ರಹಿಮಾನ್ ಸೇರಿ ದಂತೆ ಒಟ್ಟು 36 ಮಂದಿಯನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ. ಇವರಲ್ಲಿ ಬೇರೆ ಬೇರೆ ಧರ್ಮದವರು ಸೇರಿದ್ದಾರೆ.
‘ಜಿಲ್ಲೆಯಲ್ಲಿ ಕೆಲವು ಹತ್ಯೆಗಳಿಂದಾಗಿ ತಿಂಗಳಿನಿಂದ ಈಚೆಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. 10 ವರ್ಷಗಳ ಈಚೆಗೆ ನಡೆದಿರುವ ಹತ್ಯೆಗಳನ್ನು ವಿಶ್ಲೇಷಿಸಿದಾಗ, ಅವುಗಳ ಆರೋಪಿಗಳು ಕೋಮು ವಾದಿ ಸಂಘಟನೆಗಳ ಸಂಪರ್ಕದಲ್ಲಿ ಇದ್ದುದು ಕಂಡುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಕೋಮುವಾದಿ ಸಂಘಟನೆಗಳ ಮುಖಂಡರ ಪಟ್ಟಿ ತಯಾರಿಸಿ, ಅವರ ದೈನಂದಿನ ಚಟುವಟಿಕೆ ಮೇಲೆ ನಿಗಾ ಇಡಲು ಕ್ರಮ ವಹಿಸಿದ್ದೇವೆ' ಎಂದು ಅರುಣ್ ಕೆ. ತಿಳಿಸಿದ್ದಾರೆ.
ಸಂಘಟನೆಗಳಲ್ಲಿ ಗುರುತಿಸಿಕೊಂಡ ಮುಖಂಡರ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೆಲವರು ಕಡಬ ಪೊಲೀಸ್ ಠಾಣೆ ಮುಂದೆ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನೂ ಕರೆದುಕೊಂಡು ಬಂದು ಪ್ರತಿಭಟನೆ ನಡೆಸುವುದಾಗಿ ಕೆಲ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ‘ಯಾವುದೇ ಅನುಮತಿ ಪಡೆಯದೆಯೇ ಕೆಲವರು ಅಕ್ರಮವಾಗಿ ಗುಂಪು ಸೇರಿ ಕಡಬ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ 15 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದ್ದಾರೆ.
‘ಪೊಲೀಸರು ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸಿದರೆ, ಮುಂದೆಯೂ ಕ್ರಮ ಕೈಗೊಳ್ಳಲಿದ್ದೇವೆ. ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುವವರೆಗೂ ಇದು ಮುಂದುವರಿಯಲಿದೆ. ತಮ್ಮ ಕುಟುಂಬದ ಸದಸ್ಯರನ್ನೂ ಕರೆತಂದು ಪ್ರತಿಭಟನೆ ನಡೆಸುವುದಾಗಿ ಕಡಬದಲ್ಲಿ ಧರಣಿ ನಡೆಸಿದ ಕೆಲವರು ಹೇಳಿದ್ದಾರೆ. ಆ ರೀತಿ ಮಾಡಿದರೆ ಅವರ ಕುಟುಂಬದ ಸದಸ್ಯರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಎಚ್‌ಪಿ ಎಚ್ಚರಿಕೆ: ‘ಜಿಲ್ಲೆಯಲ್ಲಿ ಪೊಲೀಸರು ರಾತ್ರಿ 10ರಿಂದ 2ಗಂಟೆಯ ನಡುವೆ ಹಿಂದೂ ಕಾರ್ಯಕರ್ತರ ಮನೆಗಳಿಗೆ ಹೋಗಿ ಕಿರುಕುಳ ನೀಡುತ್ತಿದ್ದಾರೆ. ಮನೆಯಲ್ಲಿರುವ ಅನಾರೋಗ್ಯ ಪೀಡಿತರಿಗೆ ಹಾಗೂ ಹಿರಿಯರಿಗೆ ತೊಂದರೆಯಾಗುತ್ತಿದೆ. ಹಿಂದೂ ಕಾರ್ಯಕರ್ತರನ್ನು ದಮನಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ಸಮಸ್ಯೆಗಳಾದರೆ ಇಲಾಖೆಯೇ ಹೊಣೆ’ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಎಚ್ಚರಿಸಿದ್ದಾರೆ.
‘ಕಾರ್ಯಕರ್ತರ ಮನೆಗಳಿಗೆ ತೆರಳುವ ಪೊಲೀಸರು, ಜಿಪಿಎಸ್ ದಾಖಲೆಸಹಿತ ಫೋಟೊ ತೆಗೆದು ಗಾಬರಿ ಪಡಿಸುತ್ತಿದ್ದಾರೆ. ವಾಹನ ತಪಾಸಣೆ ನಡೆಸಿ ಕಿರುಕುಳ ನೀಡುತ್ತಿದ್ದಾರೆ. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದ ನಮ್ಮ ಸಂಘಟನೆಯ ಕಾರ್ಯಕರ್ತರ ಮನೆಗಳಿಗೆ ರಾತ್ರಿ ವೇಳೆ ತೆರಳಿ ಈ ರೀತಿ ಮಾಡುವುದು ಸರಿಯಲ್ಲ. ಇದನ್ನು ಸಹಿಸುವುದಿಲ್ಲ. ಸಂದೇಹಗಳಿದ್ದರೆ ನೋಟಿಸ್ ನೀಡಿ ಕರೆಸಿಕೊಳ್ಳಲಿ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುತ್ತೇವೆ’ ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಕೃಷ್ಣಪ್ರಸನ್ನ ತಿಳಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್
ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಬಜಪೆಯಲ್ಲಿ ಹತ್ಯೆಗೊಳಗಾದ ಸುಹಾಸ್ ಶೆಟ್ಡಿ ಶ್ರದ್ಧಾಂಜಲಿ ಕಾರ್ಯಕ್ರಮ ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಮಧ್ವ ಕಲ್ಯಾಣ ಮಂಟಪದಲ್ಲಿ ಮೇ 12ರಂದು ನಡೆದಿತ್ತು. ಸುಮಾರು 500 ಜನ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸಮಾಜದ ಸ್ವಾಸ್ಥ್ಯ ಕೆಡುವಂತೆ, ಮತೀಯ ಗುಂಪುಗಳ ನಡುವೆ ವೈಮನಸ್ಸು ಉಂಟು ಮಾಡುವಂತೆ, ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ತಿಳಿಸಿದ್ದಾರೆ.
‘ಇದರಿಂದಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವುದರಿಂದ, ಅವರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(2)ರ ಅಡಿ ಪ್ರಕರಣವನ್ನು ಸೋಮವಾರ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಆಡಳಿತ ಯಂತ್ರದ ದುರ್ಬಳಕೆ: ಸಂಸದ
‘ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರ ವಿರುದ್ಧ ಎಫ್ಐಆರ್ ದಾಖಲಿಸಿ ಕರಾವಳಿಯ ಹಿಂದೂ ನಾಯಕರನ್ನು ಮತ್ತು ಸಂಘಟನೆಗಳನ್ನು ಬೆದರಿಸಲು ಕಿರುಕುಳ ನೀಡಲು ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ದೂರಿದ್ದಾರೆ.
‘ಜಿಲ್ಲೆಯಲ್ಲಿ ಹಿಂದೂ ಸಮಾಜದ ನಾಯಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜೊತೆ ಮಾತನಾಡಿ ಕಳವಳ ವ್ಯಕ್ತಪಡಿಸಿದ್ದೇನೆ. ಇದೇ ವಿಷಯವಾಗಿ ಜಿಲ್ಲೆಯ ಬಿಜೆಪಿ ಶಾಸಕರು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಇದೇ 3ರಂದು (ಮಂಗಳವಾರ ) ಭೇಟಿ ಮಾಡಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.