ADVERTISEMENT

ಮನಮೋಹನ್ ಸಿಂಗ್ ನಿಧನ: PMಮೋದಿ, CMಸಿದ್ದರಾಮಯ್ಯ, HD ದೇವೇಗೌಡ ಸೇರಿ ಗಣ್ಯರ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2024, 17:33 IST
Last Updated 26 ಡಿಸೆಂಬರ್ 2024, 17:33 IST
ಡಾ. ಮನಮೋಹನ ಸಿಂಗ್ (ಸಂಗ್ರಹ ಚಿತ್ರ)
ಡಾ. ಮನಮೋಹನ ಸಿಂಗ್ (ಸಂಗ್ರಹ ಚಿತ್ರ)   

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ (92) ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ವಿರೋದ ಪಕ್ಷದ ನಾಯಕ ಆರ್‌. ಅಶೋಕ ಸೇರಿ ಹಲವು ಸಂತಾಪ ಸೂಚಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಮನಮೋಹನ್‌ ಸಿಂಗ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರೊಂದಿಗಿನ ಒಡನಾಟದ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ‘ಭಾರತವು ತನ್ನ ಅತ್ಯಂತ ಪ್ರತಿಷ್ಠಿತ ನಾಯಕರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡು ದುಃಖಿಸುತ್ತದೆ. ಹಣಕಾಸು ಸಚಿವರಾಗಿ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿಯಾಗಿ, ಜನರ ಜೀವನವನ್ನು ಸುಧಾರಿಸಲು ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ಅವರು ಪ್ರಧಾನಿಯಾಗಿದ್ದಾಗ ನಾನು ಗುಜರಾತ್ ಸಿಎಂ ಆಗಿದ್ದೆ. ಆ ವೇಳೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೆವು. ಆಡಳಿತಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ನಾವು ಚರ್ಚೆಗಳನ್ನು ನಡೆಸುತ್ತಿದ್ದೆವು’ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು,  ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ.

ADVERTISEMENT

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಯೋಜನೆಗಳಿಗೆ ಅವರಿಂದ ದೊರೆತ ಮಾರ್ಗದರ್ಶನ ಹಾಗೂ ಬೆಂಬಲವನ್ನು ಸ್ಮರಿಸಲೇಬೇಕು. ಯುಪಿಎ ಸರ್ಕಾರದ ಆಹಾರ ಹಕ್ಕು ಕಾಯ್ದೆಯು ನಮ್ಮ ನಾಡಿನ ಪ್ರಗತಿಯ ಹಾದಿಗೆ ಹೊಸ ಆಯಾಮ ಕಲ್ಪಿಸಿಕೊಟ್ಟಿದೆ.

ಮಾತಿಗಿಂತ ಕೃತಿ‌ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ.

ಮೃತರ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಅವರು ಸಂತಾಪ ಸೂಚಿಸಿ, ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ತಿಳಿದು ದುಃಖವಾಗಿದೆ. ಅವರು ಒಳ್ಳೆಯ ಮತ್ತು ತಾಳ್ಮೆಯ ವ್ಯಕ್ತಿ, ಅದ್ಭುತ ಅರ್ಥಶಾಸ್ತ್ರಜ್ಞ ಮತ್ತು ನಾನು ಗೌರವಿಸುವ ಸಹೋದ್ಯೋಗಿ. ಭಾರತದ ಆರ್ಥಿಕ ಭವಿಷ್ಯವನ್ನು ಬದಲಿಸಿದ ವ್ಯಕ್ತಿ’ ಎಂದು ಹೇಳಿದ್ದಾರೆ

ಆರ್‌. ಅಶೋಕ್‌ ಅವರು, ‘ಭಾರತದ ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರು ವಿಧಿವಶರಾದ ಸುದ್ದಿ ತೀವ್ರ ನೋವುಂಟು ಮಾಡಿದೆ. ಕೇಂದ್ರ ಹಣಕಾಸು ಸಚಿವರಾಗಿ, ಆರ್ ಬಿಐ ಗವರ್ನರ್ ಆಗಿ, ಆರ್ಥಿಕ ಸಲಹೆಗಾರರಾಗಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ, ಪ್ರಧಾನ ಮಂತ್ರಿಗಳಾಗಿ ಸುಮಾರು ಐದು ದಶಕಗಳ ಕಾಲ ಅನೇಕ ಹುದ್ದೆಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿದ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ದೇಶ ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ‌ ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿ, ‘ದಾರ್ಶನಿಕ ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ಮತ್ತು ಭಾರತವನ್ನು ನಿರ್ಣಾಯಕ ಸಮಯಗಳಲ್ಲಿ ಬುದ್ಧಿವಂತಿಕೆಯಿಂದ ಮುನ್ನಡೆಸಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಭಾರತದ ಆರ್ಥಿಕ ಸುಧಾರಣೆಗಳು, ಜಾಗತಿಕ ಮಟ್ಟ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅವರ ಕೊಡುಗೆಗಳು ಶಾಶ್ವತವಾಗಿ ಸ್ಮರಣೀಯವಾಗಿರುತ್ತವೆ. ಡಾ. ಸಿಂಗ್ ಅವರು ಸಾರ್ವಜನಿಕ ಜೀವನದಲ್ಲಿ ಸಮಗ್ರತೆ, ನಮ್ರತೆ ಮತ್ತು ಬುದ್ಧಿವಂತಿಕೆಯ ದಾರಿದೀಪವಾಗಿದ್ದರು, ತಲೆಮಾರುಗಳ ನಾಯಕರು ಮತ್ತು ನಾಗರಿಕರನ್ನು ಸಮಾನವಾಗಿ ಪ್ರೇರೇಪಿಸಿದರು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.