ADVERTISEMENT

ಧರ್ಮಸ್ಥಳ ಪ್ರಕರಣ | ಬೆಳಗಾವಿ ಅಧಿವೇಶನದಲ್ಲಿ ತನಿಖಾ ವರದಿಯ ಮಾಹಿತಿ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 8:28 IST
Last Updated 20 ನವೆಂಬರ್ 2025, 8:28 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ‘ಧರ್ಮಸ್ಥಳ ಪ್ರಕರಣ ಸಂಬಂಧ ಸರ್ಕಾರಕ್ಕೂ ವಿಶೇಷ ತನಿಖಾ ತಂಡ (ಎಸ್​ಐಟಿ) ವರದಿ ನೀಡಲಿದೆ. ಬೆಳಗಾವಿ ಅಧಿವೇಶನದಲ್ಲಿ ಅದರಲ್ಲಿನ ಅಂಶಗಳನ್ನು ತಿಳಿಸುತ್ತೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಧರ್ಮಸ್ಥಳ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದಾರೆ. ಅದರಲ್ಲಿ ಏನಿದೆ, ಸತ್ಯ ಏನು ಎಲ್ಲವೂ ಗೊತ್ತಾಗಲಿದೆ’ ಎಂದರು.

ADVERTISEMENT

‘ಸರ್ಕಾರವೇ ಎಸ್‌ಐಟಿ ರಚಿಸಿರುವುದಲ್ಲವೇ? ಹೀಗಾಗಿ ಸರ್ಕಾರಕ್ಕೂ ಅವರು ವರದಿ ಕೊಡುತ್ತಾರೆ. ವರದಿ ಬಂದ ಬಳಿಕ ಈ ಪ್ರಕರಣದಲ್ಲಿ ಏನು ಷಡ್ಯಂತ್ರ ನಡೆದಿದೆ, ಯಾರೆಲ್ಲಾ ಕಾರಣ ಎಂಬುದು ಗೊತ್ತಾಗಲಿದೆ’ ಎಂದರು.

ದರೋಡೆಕೋರರನ್ನು ಹಿಡಿಯುತ್ತೇವೆ: ಬೆಂಗಳೂರು ಎಟಿಎಂ ವಾಹನ ದರೋಡೆ ಪ್ರಕರಣವಾಗಿ ಪ್ರತಿಕ್ರಿಯಿಸಿದ ಅವರು, ‘ಪೊಲೀಸರು ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ. ದರೋಡೆಕೋರರು ಕರ್ನಾಟಕದವರಾ, ಹೊರಗಿನವರಾ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದರೋಡೆಕೋರರು ಕಾರಿಗೆ ನಕಲಿ ನಂಬರ್ ಫಲಕ ಹಾಕಿಕೊಂಡಿದ್ದರು. ಅವರು ಹೊರಗೆ ದಾಟಿದ್ದಾರಾ? ಯಾವ ವಾಹನದಲ್ಲಿ ಹಣ ಸಾಗಿಸಿದ್ದಾರೆ? ವಾಹನವು ರಾಜ್ಯದ ಹೊರಗೆ ಹೋಗಿದೆಯೇ ಎಂದೂ ಹುಡುಕುತ್ತಿದ್ದಾರೆ’ ಎಂದರು.

‘ದರೋಡೆಕೋರರು ವಾಹನ ಬದಲಾಯಿಸಿದ್ದಾರೆ ಎಂಬುದು ಗೊತ್ತಾಗಿದೆ. ಖಂಡಿತಾ ಅವರನ್ನು ಹಿಡಿಯುತ್ತೇವೆ. ಘಟನೆ ವೇಳೆ ಯಾವೆಲ್ಲಾ ವಾಹನಗಳು ಓಡಾಡಿದ್ದವು? ರಾಜ್ಯದ ಹೊರಗೆ ಹೋಗಿರುವ ವಾಹನಗಳೆಷ್ಟು? ಎಲ್ಲದರ ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸುತ್ತಿದ್ದೇವೆ’ ಎಂದೂ  ತಿಳಿಸಿದರು.

ಮಹತ್ವ ಕೊಡಬೇಕಿಲ್ಲ: ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ವಿಚಾರವಾಗಿ ಮಾತನಾಡಿದ ಅವರು, ‘ಸರ್ಕಾರಕ್ಕೆ ಎರಡೂವರೆ ವರ್ಷ ಆಗಿದೆ. ಎರಡೂವರೆ ವರ್ಷವೆಂದು ಮಹತ್ವ ಏನೂ ಕೊಡಬೇಕಿಲ್ಲ’ ಎಂದರು.

‘ಅಧಿಕಾರ ಹಸ್ತಾಂತರದ ಬಗ್ಗೆ ಹೈಕಮಾಂಡ್ ಹೇಳಿಲ್ಲ. ಹೈಕಮಾಂಡ್ ಹೇಳಿದರೆ ಅದಕ್ಕೆ ಮಹತ್ವ ಬರುತ್ತದೆ. ಇದುವರೆಗೆ ಎಲ್ಲೂ ಹೈಕಮಾಂಡ್ ನಮಗೆ ತಿಳಿಸಿಲ್ಲ. ಸಿಎಲ್‌ಪಿ ಸಭೆಯಲ್ಲೂ ಆ ವಿಚಾರ ಚರ್ಚೆಗೆ ಬಂದಿಲ್ಲ. ಹೀಗಾಗಿ ಅದಕ್ಕೆ ಮಹತ್ವ ಯಾಕೆ ಕೊಡಬೇಕು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.