ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ‘ಶವ ಹೂಳಿದ’ ಪ್ರಕರಣದ ತನಿಖೆಗಾಗಿ ಸರ್ಕಾರವು ಎಸ್‌ಐಟಿ ರಚಿಸಿರುವುದನ್ನು ವಿವಿಧ ಸಂಘಟನೆಗಳು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ವಕ್ತಾರರೂ ಸ್ವಾಗತಿಸಿದ್ದಾರೆ.
‘ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ರಾಷ್ಟ್ರ ಮಟ್ಟದಲ್ಲಿ ವಾದ– ಪ್ರತಿವಾದಕ್ಕೆ ಕಾರಣವಾಗಿತ್ತು. ಪ್ರಕರಣದ ಪ್ರಾಮಾಣಿಕ ತನಿಖೆ ಆಗಬೇಕೆಂಬುದು ಎಲ್ಲರ ಬಯಕೆಯಾಗಿತ್ತು. ಆದ್ದರಿಂದ ಎಸ್‌ಐಟಿಗೆ ವಹಿಸಿರುವುದು ಉತ್ತಮ ನಿರ್ಧಾರ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರ ಕೆ. ಪಾರ್ಶ್ವನಾಥ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಧರ್ಮಸ್ಥಳದಲ್ಲಿ ಹಲವು ವರ್ಷಗಳ ಕಾಲ ಉದ್ಯೋಗಿಯಾಗಿದ್ದೆ’ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು, ‘ಧರ್ಮಸ್ಥಳ ಗ್ರಾಮದಲ್ಲಿ ಮಹಿಳೆಯರು, ಯುವತಿಯರು ಸೇರಿ ಅನೇಕ ಕೊಲೆಗಳು ನಡೆದಿದ್ದು, ಹತ್ಯೆಯಾದವರ ಪೈಕಿ ಹಲವರ ಮೃತ ದೇಹವನ್ನು ನಾನೇ ಹೂತುಹಾಕಿದ್ದೇನೆ’ ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿ ನಂತರ ಇಬ್ಬರು ವಕೀಲರ ಜೊತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ತೆರಳಿ ಹೇಳಿಕೆ ದಾಖಲಿಸಿದ್ದರು.
ಇದಾದ ಬಳಿಕ ಘಟನೆ ಬಗ್ಗೆ ತನಿಖೆಯಾಗಬೇಕು ಎಂದು ಹಲವು ಸಂಘಟನೆಗಳು, ಹೋರಾಟಗಾರರು ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಹೇಳಿಕೆ ಕೊಟ್ಟ ವ್ಯಕ್ತಿಯ ಮಂಪರು ಪರೀಕ್ಷೆ, ಸುಳ್ಳುಪತ್ತೆ ಪರೀಕ್ಷೆ ಮತ್ತು ಬೆರಳಚ್ಚು ಸಂಗ್ರಹಕ್ಕೆ ಅನುಮತಿ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ನಡುವೆ, ‘2003ರಲ್ಲಿ ಧರ್ಮಸ್ಥಳದಿಂದ ನಾಪತ್ತೆಯಾಗಿದ್ದ ತನ್ನ ಪುತ್ರಿ ಅನನ್ಯಾ ಭಟ್ ಬಗ್ಗೆ ಮಾಹಿತಿ ನೀಡಬೇಕು’ ಎಂದು ಮಹಿಳೆಯೊಬ್ಬರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು. ರಾಜ್ಯ ಮಹಿಳಾ ಆಯೋಗವು ವಿಶೇಷ ತನಿಖಾ ತಂಡ ರಚಿಸುವಂತೆ ಸರ್ಕಾರವನ್ನು ಕೋರಿದರೆ, ವಿಮೆನ್ ಇಂಡಿಯಾ ಮೂವ್‌ಮೆಂಟ್, ಡಿವೈಎಫ್‌ಐ, ಎಸ್‌ಡಿಪಿಐ ಮುಂತಾದ ಸಂಘಟನೆಗಳು ತನಿಖೆಗೆ ಒತ್ತಾಯಿಸಿದ್ದವು.
ಸಿಪಿಎಂ, ಎಸ್‌ಡಿಪಿಐ ಸ್ವಾಗತ: ‘ಧರ್ಮಸ್ಥಳಲ್ಲಿ ವರ್ಷಗಳ ಹಿಂದೆ ಪ್ರಕರಣಗಳು ನಡೆದಿದ್ದು ಸಾಕ್ಷ್ಯನಾಶ ಮಾಡಲಾಗಿ. ಆದ್ದರಿಂದ ತನಿಖೆ ಕೂಲಂಕಷವಾಗಿ ನಡೆಯಬೇಕು. ಕಾಲವಿಳಂಬಕ್ಕೆ ಅವಕಾಶ ನೀಡದೆ ಸತ್ಯ ಬಯಲಾಗಬೇಕು’ ಎಂದು ಸಿಪಿಐ ಮತ್ತು ಡಿವೈಎಫ್‌ಐ ಪ್ರತ್ಯೇಕ ಪ್ರಕಟಣೆಯಲ್ಲಿ ಆಗ್ರಹಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.