ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಬೆಂಗಳೂರು: ತಮ್ಮ ವಿರುದ್ಧ ಮುಖ್ಯಮಂತ್ರಿ ಕೈಯೆತ್ತಿದ್ದರಿಂದ ನೊಂದು ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಎನ್.ವಿ. ಭರಮನಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿ ಸಮಾಧಾನಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸಮಾವೇಶವೊಂದರಲ್ಲಿ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ವೇದಿಕೆಯಲ್ಲಿ ಎನ್.ವಿ.ಭರಮನಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಎತ್ತಿ ರೇಗಿದ್ದ ಪ್ರಸಂಗ ಇತ್ತೀಚೆಗೆ ನಡೆದಿತ್ತು. ಇದರಿಂದ ನೊಂದಿದ್ದ ಅವರು, ಸ್ವಯಂ ನಿವೃತ್ತಿ ಕೋರಿ ಒಂದು ತಿಂಗಳ ಹಿಂದೆ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು.
‘ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿಲ್ಲ’: ಭರಮನಿ ಅವರಿಗೆ ಕರೆ ಮಾಡಿದ ಮುಖ್ಯಮಂತ್ರಿ, ‘ಸ್ವಯಂನಿವೃತ್ತಿ ನಿರ್ಧಾರ ಬೇಡ. ಅದನ್ನು ವಾಪಸ್ ಪಡೆಯಿರಿ. ನಾನು ಅಂದು ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿಲ್ಲ. ನಿಮಗೆ ಅಗೌರವ ತೋರಬೇಕು ಎಂದು ಮಾಡಿದ್ದಲ್ಲ. ಅಪಮಾನ ಮಾಡುವ ಉದ್ದೇಶವೂ ನನಗಿರಲಿಲ್ಲ’ ಎಂದು ಮನವರಿಕೆ ಮಾಡಿದ್ದಾರೆ.
‘ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು. ಹೀಗಾಗಿ, ಕೋಪ ಬಂದು ಮಾತನಾಡಿದ್ದೇನೆ. ಯಾವುದೇ ಬೇಸರ ಮಾಡಿಕೊಳ್ಳಬೇಡಿ. ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿರುವ ಮನವಿಯನ್ನು ವಾಪಸ್ ಪಡೆದುಕೊಳ್ಳಿ. ನೋವಾಗಿದ್ದರೆ ಕ್ಷಮಿಸಿ ಎಂದು ಸಮಾಧಾನಪಡಿಸಿದ್ದಾರೆ’ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.