ADVERTISEMENT

ಡಿಜಿಟಲ್‌ ಅರೆಸ್ಟ್ ಪ್ರಕರಣ: ದೋಚಿದ್ದು ₹312 ಕೋಟಿ, ಸಿಕ್ಕಿದ್ದು ₹24 ಕೋಟಿ

ಇನ್ನೂ ಪತ್ತೆಯಾಗದ ₹287.62 ಕೋಟಿ

ಆದಿತ್ಯ ಕೆ.ಎ
Published 24 ಜನವರಿ 2026, 0:00 IST
Last Updated 24 ಜನವರಿ 2026, 0:00 IST
<div class="paragraphs"><p>ಡಿಜಿಟಲ್‌ ಅರೆಸ್ಟ್‌ (ಸಾಂದರ್ಭಿಕ ಚಿತ್ರ)</p></div>

ಡಿಜಿಟಲ್‌ ಅರೆಸ್ಟ್‌ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಸಾರ್ವಜನಿಕರನ್ನು ಬೆದರಿಸಿ ಹಣ ದೋಚಲು ಸೈಬರ್ ವಂಚಕರು ಬಳಸುತ್ತಿರುವುದು ‘ಡಿಜಿಟಲ್‌ ಅರೆಸ್ಟ್’. ಈ ವಂಚನೆಯ ತಂತ್ರದ ಮೂಲಕವೇ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ₹312.47 ಕೋಟಿ ದೋಚಿದ್ದಾರೆ.

ಈ ಪ್ರಕರಣಗಳ ತನಿಖೆ ನಡೆಸಿರುವ ಸೈಬರ್ ಅಪರಾಧ ಠಾಣೆಯ ಪೊಲೀಸರಿಗೆ ಸಿಕ್ಕಿದ್ದು ಮಾತ್ರ ₹24.85 ಕೋಟಿ. ಉಳಿದ ₹287.62 ಕೋಟಿಯ ಮೂಲವೇ ಪತ್ತೆ ಆಗಿಲ್ಲ.

ADVERTISEMENT

ಅಷ್ಟೊಂದು ಪ್ರಮಾಣದ ಹಣ ಯಾವ ಯಾವ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಆಗಿದೆ ಎಂಬುದಕ್ಕೆ ಪುರಾವೆಯೇ ಸಿಕ್ಕಿ‌ಲ್ಲ. ಈಗಲೂ ಸೈಬರ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ‘ಡಿಜಿಟಲ್‌ ಅರೆಸ್ಟ್‌’ಗೆ ಹೆದರಿ ಸೈಬರ್ ವಂಚಕರು ನೀಡಿದ್ದ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿದ್ದ ನೂರಾರು ಮಂದಿ ಹಣ ಮರಳಿ ಪಡೆಯಲು ಇಂದಿಗೂ ಚಾತಕ ಪಕ್ಷಿಯಂತೆ ಕಾದಿದ್ದಾರೆ. ಆದರೆ, ಕಳೆದುಕೊಂಡ ಹಣ ಪತ್ತೆಯಾಗಿಲ್ಲ.

2023ರ ಜನವರಿಯಿಂದ 2025ರ ಡಿಸೆಂಬರ್‌ವರೆಗೆ ರಾಜ್ಯದಲ್ಲಿ 57,733 ವಿವಿಧ ಮಾದರಿಯ ಸೈಬರ್ ವಂಚನೆಗಳು ವರದಿ ಆಗಿದ್ದವು. ಆ ಪೈಕಿ 1,314 ‘ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳಾಗಿವೆ.

‘ತಮ್ಮ ಹೆಸರಿನಲ್ಲಿ ಬಂದಿರುವ ಕೊರಿಯರ್‌ನಲ್ಲಿ ಮಾದಕ ವಸ್ತುಗಳು ಸಾಗಣೆ ಆಗುತ್ತಿವೆ, ಅಕ್ರಮ ಹಣ ವರ್ಗಾವಣೆ ಆಗುತ್ತಿರುವ ಬ್ಯಾಂಕ್‌ ಖಾತೆಗೆ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಜೋಡಿಸಲಾಗಿದೆ’ ಎಂದು ಮುಂಬೈ ಪೊಲೀಸರು, ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಕರೆ ಮಾಡಿ ಬೆದರಿಸಿ ಹಲವರನ್ನು ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸುತ್ತಿದ್ದಾರೆ. ವಂಚಕರಿಂದ ₹24.85 ಕೋಟಿಯಷ್ಟು ಹಣವನ್ನು ಜಪ್ತಿ ಮಾಡಿದ್ದೇವೆ. ಆ ಪೈಕಿ ದೂರುದಾರರಿಗೆ ₹18.33 ಕೋಟಿ ವಾಪಸ್ ಕೊಡಿಸಲು ಸಾಧ್ಯವಾಗಿದೆ’ ಎಂದು ಮೂಲಗಳು ತಿಳಿಸಿವೆ.

ವಂಚನೆ ನಡೆದರೆ ‘ಗೋಲ್ಡನ್‌ ಅವರ್‌’ನಲ್ಲಿ(ಒಂದು ತಾಸು) ‘ರಾಷ್ಟ್ರೀಯ ಸೈಬರ್ ಸಹಾಯವಾಣಿ’ (ಎನ್‌ಸಿಆರ್‌ಪಿ) ಅಥವಾ ಸಮೀಪದ ಸೈಬರ್ ಠಾಣೆಗೆ ದೂರು ನೀಡಬೇಕು. ವಂಚನೆಯಾದ ಕೆಲವೇ ನಿಮಿಷಗಳಲ್ಲಿ ಮಾಹಿತಿ ನೀಡಿದರೆ ವರ್ಗಾವಣೆಯಾದ ಹಣವನ್ನು ಬ್ಯಾಂಕ್‌ಗಳಲ್ಲೇ ತಡೆ ಹಿಡಿಯಲು ಸಾಧ್ಯವಾಗಲಿದೆ. ಆದರೆ, ಡಿಜಿಟಲ್‌ ಅರೆಸ್ಟ್‌ನಂತಹ ಪ್ರಕರಣಗಳಲ್ಲಿ ವಂಚಕರು, ದೂರುದಾರನನ್ನು ವಿಡಿಯೊ ಕರೆಗೆ ಒಳಪಡಿಸಿ ಕೊಠಡಿಯಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಾರೆ. ಕೆಲವು ಪ್ರಕರಣಗಳಲ್ಲಿ ಎರಡರಿಂದ ಮೂರು ದಿನ ಮನೆಯಿಂದ ಹೊರಕ್ಕೆ ಬರಲು ಬಿಡುವುದಿಲ್ಲ. ಈ ಕಾರಣದಿಂದ ದೂರು ನೀಡಲು ವಿಳಂಬವಾಗುತ್ತಿದೆ. ಆರೋಪಿಗಳ ಬಂಧನ, ಹಣ ವರ್ಗಾವಣೆಗೆ ತಡೆಯೊಡ್ಡುವ ಪ್ರಕ್ರಿಯೆ ಸಹ ವಿಳಂಬವಾಗುತ್ತಿದೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

ಬೇರೆ ಬೇರೆ ಕಡೆಗೆ ಹಣ ವರ್ಗ: ‘ಇಂದಿರಾನಗರದ 57 ವರ್ಷದ ಮಹಿಳೆಯೊಬ್ಬರಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ‘ಡಿಜಿಟಲ್ ಅರೆಸ್ಟ್‌ ’ ಹೆಸರಿನಲ್ಲಿ ಬೆದರಿಸಿದ್ದ ವಂಚಕರು ₹31.83 ಕೋಟಿ ಸುಲಿಗೆ ಮಾಡಿದ್ದರು. ರಾಜ್ಯದಲ್ಲಿ ಈವರೆಗೆ ವರದಿಯಾದ ಅತ್ಯಧಿಕ ಮೊತ್ತ ಕಳೆದುಕೊಂಡ ‘ಡಿಜಿಟಲ್ ಅರೆಸ್ಟ್’ ಪ್ರಕರಣ ಇದಾಗಿತ್ತು. ಅವರು ಐ.ಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗನ ಮದುವೆ, ವಿದೇಶ ಪ್ರಯಾಣ, ಅನಾರೋಗ್ಯದ ಕಾರಣ ಸಂತ್ರಸ್ತೆ ತಡವಾಗಿ ದೂರು ನೀಡಿದ್ದರು. ನವೆಂಬರ್ 14ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಹಣವು ಬೇರೆ ಬೇರೆ ಕಡೆಗೆ ವರ್ಗಾವಣೆ ಆಗಿರುವುದು ಪತ್ತೆ ಆಗಿತ್ತು. ವಿಳಂಬವಾಗಿ ದೂರು ನೀಡುತ್ತಿರುವುದು ತನಿಖೆಗೆ ತೊಡಕಾಗಿದೆ’ ಎಂದು ಅವರು ಹೇಳಿದರು.

809 ಗ್ರೂಪ್‌, ಆ್ಯಪ್‌ ನಿಷ್ಕ್ರಿಯ

ವಂಚಿಸಲು ನಕಲಿ ಸಿಮ್‌ ಕಾರ್ಡ್, ಬ್ಯಾಂಕ್‌ನ ನಕಲಿ ಖಾತೆ ಬಳಸಲಾಗುತ್ತಿದೆ. ನಕಲಿ ಖಾತೆಗಳ ವಿವರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ರೀತಿಯ ವಿವರ ಹಂಚಿಕೊಂಡ 268 ಫೇಸ್‌ಬುಕ್ ಗುಂಪುಗಳು, 465 ಟೆಲಿಗ್ರಾಂ ಗುಂಪುಗಳು, 15 ಇನ್‌ಸ್ಟಾಗ್ರಾಂ ಖಾತೆಗಳು, 61 ವಾಟ್ಸ್‌ಆ್ಯಪ್‌ಗಳನ್ನು ಇದುವರೆಗೂ ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲ ಪ್ರಕರಣಗಳೂ ಸಿಬಿಐಗೆ

‘ದೇಶದಾದ್ಯಂತ ದಾಖಲಾದ ಡಿಜಿಟಲ್‌ ಅರೆಸ್ಟ್ ವಂಚನೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸುವಂತೆ ಸುಪ್ರೀಂ ಕೋರ್ಟ್‌ ಡಿಸೆಂಬರ್‌ನಲ್ಲಿ ಸೂಚಿಸಿತ್ತು. ರಾಜ್ಯದ ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ತನಿಖಾ ಹಂತದ ಮಾಹಿತಿ, ಪ್ರಕರಣಗಳ ಅಂಕಿ ಅಂಶಗಳನ್ನು ಸಿಬಿಐಗೆ ನೀಡಲಾಗುವುದು. ತನಿಖೆಗೆ ಎ.ಐ ನೆರವು ಪಡೆದುಕೊಳ್ಳಲು ಚಿಂತಿಸಲಾಗಿದೆ. ಸೈಬರ್ ಪೊಲೀಸರಿಗೆ ಕಾರ್ಯಾಚರಣೆಯ ತರಬೇತಿಯನ್ನೂ ನೀಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.