ವಿಧಾನಸಭೆ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಅನುದಾನ, ಸರ್ಕಾರಿ ಸಂಸ್ಥೆಗಳು ಎಲ್ಲವನ್ನೂ ಮುಖ್ಯಮಂತ್ರಿ, ಸಚಿವರು ಪ್ರಭಾವ ಬಳಸಿಕೊಂಡು ತಮ್ಮ ಕ್ಷೇತ್ರಗಳಿಗೆ ಕೊಂಡೊಯ್ಯುತ್ತಿದ್ದಾರೆ. ಹೊಸ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್‌ನ ಕೆ.ಎಸ್. ಆನಂದ್ ಅವರು ವಿಧಾನಸಭೆಯಲ್ಲಿ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಉನ್ನತ ಶಿಕ್ಷಣ ಸಚಿವರ ಕ್ಷೇತ್ರಕ್ಕೆ ಎಂಜಿನಿಯರಿಂಗ್ ಕಾಲೇಜು ಮತ್ತು ಕೃಷಿ ಸಚಿವರ ಕ್ಷೇತ್ರಕ್ಕೆ ಕೃಷಿ ವಿಜ್ಞಾನಗಳ ಕಾಲೇಜನ್ನು ಮಂಜೂರು ಮಾಡಲಾಗಿದೆ. ಎಲ್ಲವೂ ಪ್ರಭಾವ ಉಳ್ಳವರ ಕ್ಷೇತ್ರಗಳ ಪಾಲಾಗುತ್ತಿವೆ. ಹೊಸ ಶಾಸಕರ ಕ್ಷೇತ್ರಗಳಿಗೆ ಏನೂ ಸಿಗುತ್ತಿಲ್ಲ. ಹೀಗಾದರೆ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವೆ’ ಎಂದು ಕೇಳಿದರು.
ಕ್ಷೇತ್ರದ ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಷ್ಟ. ಪ್ರಭಾವ ಇರುವವರ ಕ್ಷೇತ್ರಗಳಿಗೆ ಸೌಲಭ್ಯ ನೀಡಿದಂತೆ ಪ್ರಭಾವ ಇಲ್ಲದವರ ಕ್ಷೇತ್ರಗಳಿಗೂ ಒದಗಿಸಬೇಕು. ಎಲ್ಲ ಶಾಸಕರ ಕ್ಷೇತ್ರಗಳೂ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನ ಜೆ.ಎನ್. ಗಣೇಶ್ ಮಾತನಾಡಿ, ‘ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಆದರೆ, ವ್ಯವಸ್ಥಿತವಾದ ಮಾರುಕಟ್ಟೆ ಸೌಲಭ್ಯ ಇಲ್ಲ. ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
‘ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೇ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ತೊಗರಿ ಬೆಳೆಗೆ ನೆಟೆ ರೋಗ ತಗುಲಿ ರೈತರು ಸಂಕಷ್ಟದಲ್ಲಿದ್ದಾರೆ. ಪ್ರತಿ ಎಕರೆ ಬೆಳೆ ಹಾನಿಗೆ ಕನಿಷ್ಠ ₹ 50,000 ಪರಿಹಾರ ನೀಡಬೇಕು’ ಎಂದು ಬಿಜೆಪಿಯ ಬಸವರಾಜ ಮತ್ತಿಮಡು ಆಗ್ರಹಿಸಿದರು.
ಬಿಜೆಪಿಯ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವುದು ಮತ ಬ್ಯಾಂಕ್ ಕೇಂದ್ರಿತ ಬಜೆಟ್. ಇದರಿಂದ ರಾಜ್ಯದ ಅಭಿವೃದ್ಧಿಗೆ ಅನುಕೂಲ ಆಗುವುದಿಲ್ಲ. ಕಲ್ಯಾಣ ಪಥ ಯೋಜನೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ತಲಾ ₹ 34 ಕೋಟಿ ಅನುದಾನ ನೀಡಿದ್ದರೆ, ಬಿಜೆಪಿ, ಜೆಡಿಎಸ್ ಶಾಸಕರಿಗೆ ತಲಾ ₹ 11 ಕೋಟಿ ನೀಡಲಾಗಿದೆ. ಈ ತಾರತಮ್ಯ ಏಕೆ’ ಎಂದು ಪ್ರಶ್ನಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.