ADVERTISEMENT

ವೈದ್ಯಕೀಯ ಕಾಲೇಜಿಗಾಗಿ ಡಿಕೆಶಿ – ಬಿಎಸ್‌ವೈ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 10:23 IST
Last Updated 31 ಅಕ್ಟೋಬರ್ 2019, 10:23 IST
ಡಿ.ಕೆ.ಶಿವಕುಮಾರ್‌ ಹಾಗೂ ಬಿ.ಎಸ್‌.ಯಡಿಯೂರಪ್ಪ
ಡಿ.ಕೆ.ಶಿವಕುಮಾರ್‌ ಹಾಗೂ ಬಿ.ಎಸ್‌.ಯಡಿಯೂರಪ್ಪ    

ಬೆಂಗಳೂರು: ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಳಾಂತರಿಸಿರುವುದು ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವಿನ ಜಟಾಪಟಿಗೆ ಕಾರಣವಾಗಿದೆ.

ಸ್ಥಳಾಂತರಿಸಿರುವ ಕಾಲೇಜನ್ನು ಕನಕಪುರಕ್ಕೆ ವಾಪಸ್ ಕೊಡಬೇಕು ಎಂದು ಶಿವಕುಮಾರ್ ಪಟ್ಟುಹಿಡಿದಿದ್ದರೆ, ಜಿಲ್ಲಾ ಕೇಂದ್ರಗಳಿಗೆ ಮಾತ್ರ ವೈದ್ಯಕೀಯ ಕಾಲೇಜು ನೀಡಲಾಗುವುದು. ತಾಲ್ಲೂಕು ಕೇಂದ್ರಕ್ಕೆ ಕೊಡುವುದಿಲ್ಲ ಎಂದು ಯಡಿಯೂರಪ್ಪ ಪ್ರತಿಪಟ್ಟು ಹಾಕಿದ್ದಾರೆ. ಇಬ್ಬರೂ ತಮ್ಮ ನಿಲುವಿಗೆ ಅಂಟಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಹೋರಾಟದ ರೂಪ ತಾಳಲಿದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಹೇಳಿಕೆ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ‘ಯಡಿಯೂರಪ್ಪ ಅವರ ರಾಜಕೀಯ ತೆಗೆದುಕೊಂಡು ನಾನೇನು ಮಾಡಲಿ. ಮೈತ್ರಿ ಸರ್ಕಾರದ ಸಮಯದಲ್ಲಿ ಕಾಲೇಜು ಮಂಜೂರು ಮಾಡಿದ್ದು, ಈ ನಿರ್ಧಾರ ಬದಲಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಗುಡುಗಿದರು.

ADVERTISEMENT

‘ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ.ಕೆ.ಸುಧಾಕರ್, ಕಾಲೇಜು ಬೇಕು ಎಂದು ಕೇಳುವುದು ತಪ್ಪಲ್ಲ. ಅವರಿಗೂ ಕೊಡಲಿ, ನಮಗೂ ಕಾಲೇಜು ನೀಡಲಿ. ಯಾರನ್ನೋ ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ ಎಂಬ ಕಾರಣಕ್ಕೆ ಕನಕಪುರಕ್ಕೆ ಮುಂಜೂರಾಗಿದ್ದನ್ನು ಕಿತ್ತುಕೊಳ್ಳುವುದು ಸರಿಯಲ್ಲ’ ಎಂದರು.

‘ಕೆಲವರು ತಮ್ಮ ಸಾಧನೆ ಹೇಳಿಕೊಂಡು ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಸ್ಮರಿಸುತ್ತಾರೆ. ಹಾಗಾಗಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ತರುವುದು ನನ್ನ ರಾಜಕೀಯ ಜೀವನದ ಗುರಿ. ಇದು ಸಿಗದಿದ್ದರೆ ಸುಮ್ಮನೆ ಕೂರುವುದಿಲ್ಲ’ ಎಂದು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.