ADVERTISEMENT

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎನ್ನಲು ನೀವು ಯಾರು?: ಡಿಕೆಶಿಗೆ ಶೋಭಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2025, 12:39 IST
Last Updated 27 ಆಗಸ್ಟ್ 2025, 12:39 IST
<div class="paragraphs"><p>ಶೋಭಾ ಕರಂದ್ಲಾಜೆ</p></div>

ಶೋಭಾ ಕರಂದ್ಲಾಜೆ

   

ಬೆಂಗಳೂರು: 'ಹೈಕಮಾಂಡ್‌ನ ಕೆಂಗಣ್ಣಿನಿಂದ ಬಚಾವಾಗಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಚಾಮುಂಡಿ ದೇವಸ್ಥಾನದ ಮೇಲೆ ವಿವಾದ ಹುಟ್ಟು ಹಾಕಿದ್ದಾರೆ' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹಿಂದೂಗಳಿಗೆ, ಹಿಂದೂ ದೇವಸ್ಥಾನಗಳಿಗೆ ಅಪಮಾನಿಸುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು ಮಾತನಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಅವರೇ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎನ್ನಲು ನೀವು ಯಾರು?' ಎಂದು ಪ್ರಶ್ನಿಸಿದ್ದಾರೆ.

ADVERTISEMENT

'ಹಿಂದೂ ಸಂಸ್ಕೃತಿ, ಹಿಂದೂಗಳು ಹಾಗೂ ಹಿಂದೂ ಪೂಜಾಸ್ಥಾನಗಳ ಮೇಲಿನ ನಿಮ್ಮ ನಿರಂತರವಾದ ಷಡ್ಯಂತ್ರಕ್ಕೆ ಶೀಘ್ರವೇ ಹಿಂದೂ ಸಮಾಜ ತಿಲಾಂಜಲಿ ಹಾಡಲಿದೆ' ಎಂದು ಹೇಳಿದ್ದಾರೆ.

ಕಳೆದ ದಿನ ಹೇಳಿಕೆ ನೀಡಿದ್ದ ಶೋಭಾ, 'ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟ ಹತ್ತಬಾರದು. ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಅವರಿಗೆ ನೀಡಿರುವ ಆಹ್ವಾನವನ್ನು ಕೂಡಲೇ ವಾಪಸ್ ಪಡೆಯಬೇಕು' ಎಂದು ಆಗ್ರಹಿಸಿದ್ದರು.

ಮತ್ತೊಂದೆಡೆ ಪ್ರತಿಕ್ರಿಯೆ ನೀಡಿದ್ದ ಡಿಕೆಶಿ, 'ಚಾಮುಂಡೇಶ್ವರಿ ಎಲ್ಲ ಧರ್ಮದವರಿಗೂ ಆಶೀರ್ವಾದ ಮಾಡುವಂತಹ ದೇವರು.‌ ರಾಜ ವಂಶಸ್ಥರು ಹಾಗೂ ನಂತರ ಬಂದ ಸರ್ಕಾರಗಳು ಚಾಮುಂಡಿ ತಾಯಿಯನ್ನು ನಾಡದೇವಿ ಎಂದು ಕರೆದಿವೆ. ಈ ದೇಗುಲ ಸಾರ್ವಜನಿಕರ ಆಸ್ತಿ. ನಾಡಧ್ವಜ, ನಾಡದೇವಿ, ರಾಷ್ಟ್ರಧ್ವಜ ಹಾಗೂ ದೇವರಿಗೆ ಜಾತಿ, ಧರ್ಮ ಬಣ್ಣದ ರಾಜಕೀಯ ಲೇಪನ‌ ಮಾಡುವ ಅಗತ್ಯವಿಲ್ಲ' ಎಂದಿದ್ದರು.

'ಹೇಗೆ ನೀರಿಗೆ, ಬೆಳಕಿಗೆ, ಗಾಳಿಗೆ ಯಾವುದೇ ಜಾತಿ ಧರ್ಮ ಇಲ್ಲವೋ, ಅದೇ ರೀತಿ ದೇವರಿಗೂ ಧರ್ಮವಿಲ್ಲ. ಪ್ರಾರ್ಥನೆಯು ಯಾರೊಬ್ಬರ ಸ್ವತ್ತಲ್ಲ' ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.