ಆರ್. ಅಶೋಕ, ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಚಾಮುಂಡೇಶ್ವರಿ ದೇವಾಲಯ ಹಿಂದೂಗಳ ಆಸ್ತಿ ಅಲ್ಲ ಎನ್ನುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರು ತಕ್ಷಣ ಹಿಂದೂಗಳ ಬಳಿ ಕ್ಷಮೆ ಯಾಚಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು.
ಕೇಂದ್ರ ಸಚಿವ ವಿ. ಸೋಮಣ್ಣ ಜೊತೆ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಅಪಮಾನ ಮಾಡುತ್ತಿದೆ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಶಿವಕುಮಾರ್ ಹೇಳುವುದಾದರೆ, ಅದೇನು ವಕ್ಫ್ ಮಂಡಳಿಯ ಆಸ್ತಿಯೇ’ ಎಂದು ಪ್ರಶ್ನಿಸಿದರು.
‘ಚಾಮುಂಡೇಶ್ವರಿಯನ್ನು ಹಿಂದೂ ದೇವರಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ. ಈ ದೇವಾಲಯವನ್ನು ಮುಟ್ಟಿದರೆ ಇಡೀ ರಾಜ್ಯದಲ್ಲಿ ದಂಗೆ ಆಗಲಿದೆ’ ಎಂದು ಎಚ್ಚರಿಕೆ ನೀಡಿದರು.
‘ಮೈಸೂರು, ವಿಜಯನಗರ ಸಾಮ್ರಾಜ್ಯ ಹಾಳು ಮಾಡಿದ ಮುಸ್ಲಿಮರಿಂದ ದಸರಾ ಉದ್ಘಾಟನೆ ಮಾಡಿಸುತ್ತಿರುವುದು ನಾಚಿಕೆಗೇಡು. ತಾಯಿ ಭುವನೇಶ್ವರಿಯನ್ನು ವಿಗ್ರಹ ಮಾಡಿದ್ದೀರಿ, ಬಾವುಟವನ್ನು ಅರಿಶಿನ –ಕುಂಕುಮ ಮಾಡಿಟ್ಟಿದ್ದೀರಿ ಎಂದು ಬಾನು ಮುಷ್ತಾಕ್ ಟೀಕಿಸಿದ್ದರು. ಹಾಗಾದರೆ, ಅರಿಶಿನ-ಕುಂಕುಮ ಹಚ್ಚದೇ ಸೆಂಟ್ ಹೊಡೆಯಬೇಕಿತ್ತೇ’ ಎಂದು ಪ್ರಶ್ನಿಸಿದರು.
‘ಚಾಮುಂಡೇಶ್ವರಿ ಕರೆಯುತ್ತಿದ್ದಾರೆ ಎಂದು ಬಾನು ಮುಷ್ತಾಕ್ ಹೇಳುತ್ತಾರೆ. ಆದರೆ, ಅವರನ್ನು ಮಸೀದಿಯವರೂ ಕರೆಯಲ್ಲ. ಕವಿ ನಿಸಾರ್ ಅಹಮದ್ ಬಗ್ಗೆ ಯಾರೂ ಮಾತಾಡುವುದಿಲ್ಲ. ಅವರು ಯಾವುದೇ ಧರ್ಮದ ವಿರುದ್ಧವಾಗಿ ಮಾತನಾಡಲಿಲ್ಲ. ಅಂಥವರಿಗೆ ಬಾನು ಮುಷ್ತಾಕ್ ಅವರನ್ನು ಹೋಲಿಸುವುದೇಕೆ’ ಎಂದರು.
ಮಾತಿನಲ್ಲಿ ವಿವಾದದ ಅಂಶ ಇಲ್ಲ’
‘ಚಾಮುಂಡಿ ಬೆಟ್ಟ ಎಂಬುದು ಧಾರ್ಮಿಕ ಭಾವನೆಯನ್ನು ಪರಸ್ಪರ ಗೌರವಿಸುವ ಎಲ್ಲರಿಗೂ ಸೇರಿದ್ದು ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತನ್ನು ಸರಿಯಾಗಿ ಅರ್ಥೈಸದೆ, ವಿವಾದ ಮಾಡುತ್ತಿರುವುದು ಬೇಸರದ ಸಂಗತಿ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
‘ಎಲ್ಲರೂ ಕೂಡಿ ಆಚರಿಸುವ ದಸರಾ ನಾಡ ಹಬ್ಬದಲ್ಲೂ ಧಾರ್ಮಿಕ ವಿಷ ಬಿತ್ತುವ ಕೆಲಸ ಮಾಡುತ್ತಿರುವ ಬಿಜೆಪಿಗರಿಗೆ ನಿಜಕ್ಕೂ ಈ ನೆಲದ ಬಹುತ್ವದ ವಿಷಯಗಳಾಗಲಿ, ಸಂವಿಧಾನವು ನೇರವಾಗಿ ಸಾರುತ್ತಿರುವ ಭಾವೈಕ್ಯದ ಬಗ್ಗೆಯಾಗಲಿ ಅರ್ಥವಾಗುತ್ತಿಲ್ಲ’ ಎಂದಿದ್ದಾರೆ.
‘ಚುನಾವಣಾ ರಾಜಕೀಯದ ದೃಷ್ಟಿಯಿಂದ ಕೋಮು ರಾಜಕಾರಣ ಮಾಡುತ್ತಿರುವ ಬಿಜೆಪಿಗರಿಗೆ ಜನರ ಬದುಕು ಮತ್ತು ಅವರ ಅನ್ನದ ವಿಷಯದಲ್ಲಿ ಕಿಂಚಿತ್ ಆಲೋಚನೆ ಇಲ್ಲ. ಕೋಮುವಾದಿ ಬಿಜೆಪಿಗರು ಮತ್ತೊಮ್ಮೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುವ ಸಂದರ್ಭ ಬರಲಿದೆ’ ಎಂದೂ ಹೇಳಿದ್ದಾರೆ.
‘ಧಾರ್ಮಿಕ ನಂಬಿಕೆಗೆ ಚ್ಯುತಿ’
‘ನಾಡಿನ ಇತಿಹಾಸ ಗೊತ್ತಿಲ್ಲದವರು ಮಾತನಾಡಿದರೆ ಸಹಿಸಿ
ಕೊಳ್ಳಬಹುದು. ಆದರೆ, ಶಿವಕುಮಾರ್ ಅವರು ಚಾಮುಂಡಿ ಬೆಟ್ಟದ ಬಗ್ಗೆ ಮಾತನಾಡಿರುವುದು ಅಕ್ಷಮ್ಯ’ ಎಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿ, ‘ಹಿಂದೂ ಧರ್ಮಕ್ಕೆ ಸಣ್ಣ ಅಪಚಾರ ನಡೆದರೂ ಕೆಲಸ ಮಾಡಬೇಕಿರುವುದು ನಮ್ಮ ಕರ್ತವ್ಯ. ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುವುದು ಒಳ್ಳೆಯದು. ಕಾಂಗ್ರೆಸ್ ನಾಯಕರು ಇದೇ ರೀತಿ ಹೇಳಿಕೆ ನೀಡುತ್ತಿದ್ದರೆ ನಾಮಾವಶೇಷ ಆಗುತ್ತಾರೆ’ ಎಂದರು.
‘ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ಎಂದೂ ರಾಜಕೀಯ ಮಾಡಿಲ್ಲ. ಕೆಲವರು ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ಉದ್ಧಟತನ ಬೇಡವಾಗಿತ್ತು’
ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ನನ್ನ ಯಾವ ತಕರಾರೂ ಇಲ್ಲ. ಆದರೆ ಕೆಲವರು ಈ ಬಗ್ಗೆ ಬಹಳ ಉದ್ಧಟತನದಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದು ಧಾರ್ಮಿಕ ಕ್ಷೇತ್ರದ ವಿಚಾರದಲ್ಲಿ ಬೇಡ, ಬೇಕಾಗಿಯೂ ಇಲ್ಲ. ಬಾನು ಮುಷ್ತಾಕ್ ಅವರಿಂದ ಪೂಜೆ ಮಾಡಿಸುವುದು ಬೇರೆ. ಆದರೆ ಚಾಮುಂಡೇಶ್ವರಿ ದೇಗುಲ ಹಿಂದೂಗಳ ಆಸ್ತಿಯಲ್ಲ ಎಂದಿದ್ದಾರೆ. ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಈ ರೀತಿ ಅಪಚಾರ ಸರಿಯಲ್ಲ. ಇದು ಕಾಂಗ್ರೆಸ್ ಸರ್ಕಾರಕ್ಕೆ ಆಪತ್ತು ತರಲಿದೆ.
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
‘ಒತ್ತಡಕ್ಕೆ ಮಣಿದ ಡಿಕೆಶಿ’
‘ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ ಎಂಬ ಹೇಳಿಕೆಯನ್ನು ಡಿ.ಕೆ.ಶಿವಕುಮಾರ್ ವಾಪಸ್ ಪಡೆಯಬೇಕು. ಸದನದಲ್ಲೇ ‘ನಮಸ್ತೆ ಸದಾ ವತ್ಸಲೆ’ ಗೀತೆ ಹಾಡಿದ್ದ ಅವರು ಯಾರದೋ ಒತ್ತಡಕ್ಕೆ ಮಣಿದು, ಗಾಂಧಿ ಕುಟುಂಬವನ್ನು ಸಂತಸಪಡಿಸಲು ಇಂತಹ ಹೇಳಿಕೆ ನೀಡಬಾರದಿತ್ತು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮಾತನಾಡದಿರುವುದೇ ಉತ್ತಮ: ಶಿವಕುಮಾರ್
‘ರಾಜಕೀಯದವರು, ಮಾಧ್ಯಮಗಳು, ಪ್ರಮೋದಾದೇವಿ, ಸಂಸದ ಯದುವೀರ್ ಹೀಗೇ ಎಲ್ಲರೂ ತಪ್ಪು ಹುಡುಕುವವರೇ. ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಹೀಗಾಗಿ, ನಾನು ಮಾತನಾಡದಿರುವುದೇ ಉತ್ತಮ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.
ದಸರಾ ಉದ್ಘಾಟಕರ ಆಯ್ಕೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಬಗ್ಗೆ ಸುದ್ದಿಗಾರರು ಕೇಳಿದಾಗ, ‘ನಾನು ಸದನದಲ್ಲಿ ಸೇರಿದಂತೆ ಎಲ್ಲಿ ಏನೇ ಮಾತನಾಡಿದರೂ, ಅದರಲ್ಲಿ ಕೇವಲ ತಪ್ಪು ಕಂಡುಹಿಡಿಯುವುದೇ ಬೇರೆಯವರ ಕೆಲಸವಾಗಿದೆ’ ಎಂದರು.
‘ಇಂತಹ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಬೇರೆ ನಾಯಕರು ಮತ್ತು ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಮಾತನಾಡಿ’ ಎಂದರು.
‘ಹಿಂದೂ ಎಂದು ಸಾಬೀತುಪಡಿಸಲು ಬಿಜೆಪಿ ಸದಸ್ಯತ್ವ ಪಡೆಯಬೇಕಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಅಪ್ಪಟ ಹಿಂದೂ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಡಿಕೆಶಿ ಅವರದ್ದು ಬೇಜವಾಬ್ದಾರಿ ಹೇಳಿಕೆ: ಯದುವೀರ್
ಮೈಸೂರು: ‘ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದ್ದು, ಆಘಾತಕಾರಿ, ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡಬಾರದು’ ಎಂದು ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಈ ದೇವಸ್ಥಾನದ ಮೇಲೆ ಜಾತ್ಯತೀತ ಪಟ್ಟಿಯನ್ನು ಹಾಕುವ ಅಗತ್ಯವಿಲ್ಲ. ಇದು ಸಹಜವಾಗಿಯೇ ಬಹುತ್ವದ ತತ್ವದ ಮೇಲಿರುವುದರಿಂದ, ಆಧುನಿಕ ಕಾಲದಲ್ಲಿ ಜಾತ್ಯತೀತವಾಗಿ ನೋಡಬಹುದು. ಆದರೆ, ಇದು ಭಾರತೀಯ, ಹಿಂದೂ ಧರ್ಮಕ್ಕೆ ಸೇರಿದ ಶಕ್ತಿ ಪೀಠ. ಕೋಟ್ಯಂತರ ಭಕ್ತರು ಚಾಮುಂಡಿ ತಾಯಿಯ ಮೇಲಿನ ನಂಬಿಕೆಯಿಂದ ಬಂದು ಪ್ರಾರ್ಥಿಸುತ್ತಾರೆ. ಆದರೆ ಅವರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.